LA 2028 Olympics: ಕ್ರಿಕೆಟ್ ಅರ್ಹತಾ ನಿಯಮಗಳು ಪ್ರಕಟ; ಯಾವೆಲ್ಲ ತಂಡಗಳಿಗೆ ಸಿಕ್ಕಿದೆ ಸ್ಥಾನ?

LA28 Cricket Qualification: 128 ವರ್ಷಗಳ ನಂತರ ಕ್ರಿಕೆಟ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಮರಳಿದೆ. ICC ಮತ್ತು IOC ಪುರುಷ-ಮಹಿಳಾ T20 ಕ್ರಿಕೆಟ್‌ಗೆ ಅರ್ಹತಾ ನಿಯಮಗಳನ್ನು ಪ್ರಕಟಿಸಿವೆ. ಆರು ತಂಡಗಳು ಭಾಗವಹಿಸಲಿವೆ. 2026ರ ICC ಶ್ರೇಯಾಂಕದ ಆಧಾರದ ಮೇಲೆ ಖಂಡಗಳ ಅಗ್ರ ತಂಡಗಳು ನೇರ ಅರ್ಹತೆ ಪಡೆಯುತ್ತವೆ. ಅಮೆರಿಕಾಕ್ಕೆ ಷರತ್ತುಬದ್ಧ ಪ್ರವೇಶವಿದ್ದು, ಉಳಿದ ಸ್ಥಾನಗಳಿಗೆ ಜಾಗತಿಕ ಅರ್ಹತಾ ಪಂದ್ಯಾವಳಿ ನಡೆಯಲಿದೆ. ವೆಸ್ಟ್ ಇಂಡೀಸ್‌ಗೆ ವಿಶೇಷ ನಿಯಮ ರೂಪಿಸಲಾಗಿದೆ.

LA 2028 Olympics: ಕ್ರಿಕೆಟ್ ಅರ್ಹತಾ ನಿಯಮಗಳು ಪ್ರಕಟ; ಯಾವೆಲ್ಲ ತಂಡಗಳಿಗೆ ಸಿಕ್ಕಿದೆ ಸ್ಥಾನ?
Olympics 2028

Updated on: Jun 29, 2026 | 5:41 PM

ಬರೋಬ್ಬರಿ 128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಮರಳುತ್ತಿದೆ. 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಕೂಡ ಒಂದು ಕ್ರೀಡೆಯಾಗಿ ಸೇರಿಸಲಾಗಿದೆ. ಇದೀಗ ಐಸಿಸಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅರ್ಹತಾ ಮಾನದಂಡಗಳನ್ನು ಘೋಷಿಸಿವೆ. ಅಂದರೆ 2028 ರ ಒಲಿಂಪಿಕ್ಸ್​ಗೆ ತಂಡಗಳನ್ನು ಯಾವ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಈ ಎರಡು ಸಮಿತಿಗಳು ಜಂಟಿಯಾಗಿ ಸ್ಪಷ್ಟಪಡಿಸಿವೆ. ಅದರಂತೆ ಮುಂಬರುವ ಒಲಿಂಪಿಕ್ಸ್​ನಲ್ಲಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ತಲಾ ಆರು ತಂಡಗಳು ಭಾಗವಹಿಸಲಿವೆ. 2028 ರ ಜುಲೈ 22 ರಿಂದ ಜುಲೈ 29 ನಡುವೆ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಜುಲೈ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳನ್ನು ಟಿ20 ಸ್ವರೂಪದಲ್ಲಿ ಆಡಿಸಲು ತೀರ್ಮಾನಿಸಲಾಗಿದೆ.

ತಲಾ 4 ತಂಡಗಳಿಗೆ ನೇರ ಪ್ರವೇಶ

ಮೇಲೆ ಹೇಳಿದಂತೆ ಪ್ರಪಂಚದಾದ್ಯಂತದ ಆರು ಪುರುಷ ಮತ್ತು ಆರು ಮಹಿಳಾ ತಂಡಗಳು ಮಾತ್ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹವಾಗಿರುತ್ತವೆ. ಅದರಂತೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಾಲ್ಕು ಖಂಡಗಳಿಂದ ಅಗ್ರಸ್ಥಾನದಲ್ಲಿರುವ 4 ತಂಡಗಳು ಒಲಿಂಪಿಕ್ಸ್‌ನಲ್ಲಿ ನೇರ ಸ್ಥಾನ ಪಡೆಯುತ್ತವೆ. ಈ 4 ತಂಡಗಳನ್ನು ಡಿಸೆಂಬರ್ 31, 2026 ರಂದು ಐಸಿಸಿ ಶ್ರೇಯಾಂಕದ ಮೂಲಕ ನಿರ್ಧರಿಸಲಾಗುತ್ತದೆ. ಇದರ ಅಡಿಯಲ್ಲಿ, ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಓಷಿಯಾನಿಯಾದಿಂದ ತಲಾ ಒಂದು ತಂಡವು ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತದೆ. ಇದರರ್ಥ ಏಷ್ಯಾದಿಂದ ಭಾರತ, ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ, ಯುರೋಪ್‌ನಿಂದ ಇಂಗ್ಲೆಂಡ್ ಮತ್ತು ಓಷಿಯಾನಿಯಾದಿಂದ ಆಸ್ಟ್ರೇಲಿಯಾ ನೇರ ಸ್ಥಾನ ಪಡೆಯುತ್ತವೆ. ಇಂಗ್ಲೆಂಡ್ ತಂಡವು ಗ್ರೇಟ್ ಬ್ರಿಟನ್ ಹೆಸರಿನಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಲಿದೆ. ಇದರಲ್ಲಿ ಇಂಗ್ಲೆಂಡ್, ಐರ್ಲೆಂಡ್ ಮತ್ತು ವೇಲ್ಸ್‌ನ ಆಟಗಾರರು ಸೇರಿದ್ದಾರೆ.

ಆತಿಥೇಯ ದೇಶಕ್ಕೆ ಲಾಭ

ಉಳಿದಂತೆ ಆತಿಥೇಯರಾಗಿ, ಯುನೈಟೆಡ್ ಸ್ಟೇಟ್ಸ್ ಪುರುಷ ಮತ್ತು ಮಹಿಳಾ ತಂಡಗಳು ನೇರ ಪ್ರವೇಶವನ್ನು ಪಡೆಯಬಹುದು. ಆದರೆ ಇಲ್ಲೊಂದು ಷರತ್ತು ವಿಧಿಸಲಾಗಿದ್ದು, ಜೂನ್ 30, 2026 ಮತ್ತು ಡಿಸೆಂಬರ್ 31, 2026 ರ ನಡುವೆ ಈ ಎರಡು ತಂಡಗಳು ಐಸಿಸಿ ಟಿ20 ಶ್ರೇಯಾಂಕದಲ್ಲಿ ವಿಶ್ವದ ಅಗ್ರ 15 ತಂಡಗಳಲ್ಲಿ ಸ್ಥಾನ ಪಡೆದಿರಬೇಕು. ಒಂದು ವೇಳೆ ಯುಎಸ್ ತಂಡಗಳು ಅಗ್ರ 15 ರೊಳಗೆ ಸ್ಥಾನಗಳನ್ನು ತಲುಪಲು ವಿಫಲವಾದರೆ, ನೇರ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗುತ್ತವೆ. ಆ ಸ್ಥಾನವನ್ನು ಶ್ರೇಯಾಂಕದಲ್ಲಿ ಎರಡನೇ ಅತ್ಯುತ್ತಮ ತಂಡಕ್ಕೆ ನೀಡಲಾಗುತ್ತದೆ. ಇನ್ನು ಆರನೇ ತಂಡವನ್ನು ಒಲಿಂಪಿಕ್ ಗ್ಲೋಬಲ್ ಅರ್ಹತಾ ಪಂದ್ಯಾವಳಿಯ ಮೂಲಕ ನಿರ್ಧರಿಸಲಾಗುತ್ತದೆ. ಈ ಅರ್ಹತಾ ಪಂದ್ಯಾವಳಿ 2027 ರಲ್ಲಿ ನಡೆಯಲಿದ್ದು, ಈಗಾಗಲೇ ಒಲಿಂಪಿಕ್ಸ್​ಗೆ ಆಯ್ಕೆಯಾಗಿರುವ ಟಾಪ್ 4 ತಂಡಗಳನ್ನು ಹೊರತುಪಡಿಸಿ ಉಳಿದ 8 ತಂಡಗಳು ಈ ಸುತ್ತನ್ನು ಆಡಲಿವೆ. ಈ ಸುತ್ತಿನಲ್ಲಿ ಗೆದ್ದ ತಂಡ 6ನೇ ತಂಡವಾಗಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುತ್ತದೆ.

ವೆಸ್ಟ್ ಇಂಡೀಸ್ ತಂಡಕ್ಕೆ ಪ್ರತ್ಯೇಕ ನಿಯಮ

ಇಲ್ಲಿ ವೆಸ್ಟ್ ಇಂಡೀಸ್ ತಂಡವು ಮೊದಲ ಎಂಟು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಐಸಿಸಿ ವೆಸ್ಟ್ ಇಂಡೀಸ್ ನೇಷನ್ಸ್ ಪ್ರಾದೇಶಿಕ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ಏಕೆಂದರೆ ವೆಸ್ಟ್ ಇಂಡೀಸ್ ಒಂದು ದೇಶವಲ್ಲ. ಬದಲಾಗಿ ಹಲವಾರು ಸಣ್ಣ ಕೆರಿಬಿಯನ್ ರಾಷ್ಟ್ರಗಳು ರಚಿಸಿದ ಸಂಯೋಜಿತ ತಂಡವಾಗಿದೆ. ಆದರೆ ಒಂದೇ ದೇಶದ ತಂಡ ಮಾತ್ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದಾದ್ದರಿಂದ, ಯಾವುದೇ ತಂಡವು ವೆಸ್ಟ್ ಇಂಡೀಸ್ ಹೆಸರಿನಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಶೇಷ ನಿಯಮವನ್ನು ಮಾಡಲಾಗಿದೆ. ಡಿಸೆಂಬರ್ 31, 2026 ರೊಳಗೆ ವೆಸ್ಟ್ ಇಂಡೀಸ್ ತಂಡವು ವಿಶ್ವದ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆದಿದ್ದರೆ, ಈ ಎಲ್ಲಾ ಕೆರಿಬಿಯನ್ ರಾಷ್ಟ್ರಗಳ ನಡುವೆ ಪ್ರತ್ಯೇಕ ಪಂದ್ಯಾವಳಿಯನ್ನು ನಡೆಸಲಾಗುತ್ತದೆ. ಈ ಪಂದ್ಯಾವಳಿಯನ್ನು ಗೆಲ್ಲುವ ದೇಶವನ್ನು ನಂತರದ ‘ಒಲಿಂಪಿಕ್ ಅರ್ಹತಾ’ ಪಂದ್ಯಗಳಲ್ಲಿ ಆಡಲು ಆಯ್ಕೆ ಮಾಡಲಾಗುತ್ತದೆ.

ಮಹಿಳಾ ತಂಡದ ಆಯ್ಕೆ ಹೇಗೆ?

2026 ರ ಮಹಿಳಾ ಟಿ20 ವಿಶ್ವಕಪ್ ಫಲಿತಾಂಶಗಳ ಆಧಾರದ ಮೇಲೆ ಒಲಿಂಪಿಕ್ಸ್‌ಗೆ ಮೊದಲ ನಾಲ್ಕು ಮಹಿಳಾ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಿಯಮಗಳ ಪ್ರಕಾರ, ನಾಲ್ಕು ಖಂಡಗಳಿಂದ ತಲಾ ಒಂದು ಅತ್ಯುತ್ತಮ ಪ್ರದರ್ಶನ ನೀಡುವ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ಏಷ್ಯಾದಿಂದ ಭಾರತ, ಓಷಿಯಾನಿಯಾದಿಂದ ಆಸ್ಟ್ರೇಲಿಯಾ, ಯುರೋಪಿನಿಂದ ಇಂಗ್ಲೆಂಡ್ (ಗ್ರೇಟ್ ಬ್ರಿಟನ್) ಮತ್ತು ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಉಳಿದ ತಂಡಗಳನ್ನು ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Mon, 29 June 26

Follow Us