ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ (Sri Lanka vs South Africa) ನಡುವಿನ ಏಕದಿನ ಸರಣಿಗಳು ಗುರುವಾರದಿಂದ ಆರಂಭವಾಗಿದೆ. ಇದಾದ ಬಳಿಕ ಲಂಕಾ ತಂಡವು ಟಿ20 ವಿಶ್ವಕಪ್ (T20 World Cup) ಅರ್ಹತಾ ಪಂದ್ಯಗಳನ್ನು ಆಡಬೇಕಿದೆ. ಆದರೆ ಅದಕ್ಕೂ ಮುನ್ನ, ತಂಡದ ನಾಯಕ ದಾಸುನ್ ಶನಕ (Dasun Shanaka) ತಮಗೆ ಟೀಮ್ ಇಂಡಿಯಾದ ಥ್ರೋ ಡೌನ್ ಸ್ಪೆಷಲಿಸ್ಟ್ನಂತಹ ಕೋಚ್ ಬೇಕು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ವೇಗದ ಬೌಲರ್‌ಗಳನ್ನು ಎದುರಿಸುವ ಕೌಶಲ್ಯ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದಿದ್ದಾರೆ. ಶನಕ ಅವರ ಈ ಬೇಡಿಕೆಗೆ ಮುಖ್ಯ ಕಾರಣ, ಟೀಮ್ ಇಂಡಿಯಾ ಥ್ರೋ ಡೌನ್ ತರಬೇತುದಾರ ನುವಾನ್ ಸೆನೆವಿರತ್ನ ಅಲಿಯಾಸ್ ಬಾವಾ. ಏಕೆಂದರೆ ಶ್ರೀಲಂಕಾ ಪರ ಕ್ರಿಕೆಟ್ ಆಡಿರುವ ಸುವನ್ ಸೆನೆವಿರತ್ನ ಇದೀಗ ಟೀಮ್ ಇಂಡಿಯಾ ಥ್ರೋ ಸ್ಪೆಷಲಿಸ್ಟ್. ಅವರನ್ನು ಶ್ರೀಲಂಕಾ ತಂಡಕ್ಕೆ ಕರೆತರುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂಬ ಪ್ಲ್ಯಾನ್ನಲ್ಲಿದ್ದಾರೆ ದಾಸುನ್ ಶನಕ.
2018ರಲ್ಲಿ ಟೀಮ್ ಇಂಡಿಯಾ ಸೇರುವ ಮುನ್ನ ನುವಾನ್ ಶ್ರೀಲಂಕಾದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು. ಅಭ್ಯಾಸದ ವೇಳೆ 175 ಕಿಮೀ / ಗಂ ವೇಗದಲ್ಲಿ ಥ್ರೋ ಎಸೆಯುವ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ನುವಾನ್ ಸಜ್ಜುಗೊಳಿಸುತ್ತಾರೆ. ಇದರಿಂದ ಎಷ್ಟೇ ವೇಗದಲ್ಲಿ ಚೆಂಡು ಬಂದರೂ ಸುಲಭವಾಗಿ ಗುರುತಿಸುವಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗುತ್ತದೆ.
ದಾಸುನ್ ಹೇಳುವಂತೆ ಶ್ರೀಲಂಕಾ ತಂಡದಲ್ಲಿ ಕೇವಲ ಮೂವರು ವೇಗದ ಬೌಲರ್‌ಗಳು ಮಾತ್ರ ಇದ್ದಾರೆ. ಅವರು ನಿರಂತರವಾಗಿ 140 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯಬಲ್ಲರು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಹೆಚ್ಚಿನ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಬೌಲರ್‌ಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಶ್ರೀಲಂಕಾದ ಯುವ ಬ್ಯಾಟ್ಸ್‌ಮನ್‌ಗಳನ್ನು ಉತ್ತಮವಾಗಿ ಸಜ್ಜುಗೊಳಿಸಲು ‘ಬಾವಾ’ ನಂತಹ ತಜ್ಞ ಥ್ರೋ-ಡೌನ್ ಕೋಚ್ನ ಅಗತ್ಯವಿದೆ. ಹೀಗಾಗಿ ಈ ಬೇಡಿಕೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಆಟಗಾರರಿಂದ ಪ್ರೀತಿಯಿಂದ ಬಾವಾ ಎಂದು ಕರೆಸಿಕೊಳ್ಳುವ ನುವಾನ್, ಹೆಚ್ಚುವರಿ ವೇಗ ಮತ್ತು ಬೌನ್ಸ್ ಎಸೆತಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾ ಅವರನ್ನು ನೇಮಿಸಿಕೊಂಡಿದೆ. ವಿಶೇಷವಾಗಿ ತಂಡವು ವಿದೇಶದಲ್ಲಿ ಆಡಲು ಹೋದಾಗ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ‘ಬಾವಾ’ ಅನುಭವ ತಂಡಕ್ಕೆ ಹೆಚ್ಚಿನ ಸಹಾಯಕವಾಗುತ್ತದೆ. ಅಭ್ಯಾಸದ ಅವಧಿಯಲ್ಲಿ ನಿರಂತರವಾಗಿ ಬ್ಯಾಟ್ಸ್‌ಮನ್‌ಗಳಿಗೆ ವೇಗದ ಚೆಂಡುಗಳನ್ನು ಎಸೆದು ಅಭ್ಯಾಸ ನಡೆಸುವ ಮೂಲಕ ವೇಗದ ಬೌಲರ್‌ಗಳ ಎದುರು ಆಡುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
ಬಾವಾ ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾ ಜೊತೆಗಿದ್ದಾರೆ. ವಿರಾಟ್ ಕೊಹ್ಲಿ ಅವರ ಮನವಿ ಮೇರೆಗೆ ನುವಾನ್ ಅವರನ್ನು ಬಿಸಿಸಿಐ ತಂಡಕ್ಕೆ ಕೋಚಿಂಗ್ ಬಳಗಕ್ಕೆ ಸೇರಿಸಿಕೊಂಡಿತು. ನೆಟ್ ನಲ್ಲಿ ಗಂಟೆಗೆ 175 ಕಿಮೀ ವೇಗದಲ್ಲಿ ಚೆಂಡೆಸೆಯುವ ಬಾವಾ ಅವರು ಈ ಹಿಂದೆ ಶ್ರೀಲಂಕಾ ಕೋಚಿಂಗ್ ತಂಡದಲ್ಲಿದ್ದರು. ಆದರೆ ಲಂಕಾದ ಕೆಲ ಬ್ಯಾಟ್ಸ್‌ಮನ್‌ಗಳು ಅವರ ವೇಗದ ಬಗ್ಗೆ ದೂರು ನೀಡಿದರು. ಇದಾದ ಬಳಿಕ ಅವರ ಸಾಮರ್ಥ್ಯವನ್ನು ಬಳಸಿಕೊಂಡು ಟೀಮ್ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ರೂಪಿಸಿಕೊಂಡಿದೆ.
ಇದನ್ನೂ ಓದಿ: ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್ಗೆ ಆಲೌಟ್
ಇದನ್ನೂ ಓದಿ: Shane Warne: ಸಾರ್ವಕಾಲಿಕ ಟಾಪ್ 10 ವೇಗಿಗಳನ್ನು ಹೆಸರಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್
ಇದನ್ನೂ ಓದಿ: Crime News: ಬಾಲಕನನ್ನು ಮದುವೆಯಾಗಿ ಜೈಲು ಸೇರಿದ ಯುವತಿ
(Dasun Shanaka requests throw-down coach for Sri Lanka like India’s Nuwan Seneviratne)