IPL 2022: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ (RR vs GT) ತಂಡವು ಭರ್ಜರಿ ಜಯ ಸಾಧಿಸಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯನ್ನು ಫೈನಲ್ ಗೆ ಕೊಂಡೊಯ್ಯುವಲ್ಲಿ ಡೇವಿಡ್ ಮಿಲ್ಲರ್ (David Miller) ಪ್ರಮುಖ ಪಾತ್ರ ವಹಿಸಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಮಿಲ್ಲರ್ ನಾಯಕ ಹಾರ್ದಿಕ್ ಜೊತೆಗೂಡಿ ಶತಕದ ಜೊತೆಯಾಟವಾಡಿದರು. ಅಲ್ಲದೆ ಅಜೇಯ 68 ರನ್‌ಗಳಿಸಿ ಗುಜರಾತ್ ಟೈಟಾನ್ಸ್ಗೆ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. 189 ರನ್ ಗುರಿಯನ್ನು ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗುಜರಾತ್ ಟೈಟಾನ್ಸ್ ಪೂರ್ಣಗೊಳಿಸುವಲ್ಲಿ ಕಿಲ್ಲರ್ ಮಿಲ್ಲರ್ ಪ್ರಮುಖ ಪಾತ್ರವಹಿಸಿದ್ದರು. ಏಕೆಂದರೆ ಕೊನೆಯ ಓವರ್ನಲ್ಲಿ ಗುಜರಾತ್ ತಂಡಕ್ಕೆ 16 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಪ್ರಸಿದ್ದ್ ಕೃಷ್ಣ ಅವರ ಕೊನೆಯ ಓವರ್‌ನ 3 ಎಸೆತಗಳಲ್ಲಿ ಸತತ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮಿಲ್ಲರ್ ಗುಜರಾತ್ ಟೈಟಾನ್ಸ್ಗೆ ಭರ್ಜರಿ ಜಯ ತಂದುಕೊಟ್ಟರು.
ಈ ಪಂದ್ಯದಲ್ಲಿ ರಾಜಸ್ಥಾನದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ಡೇವಿಡ್ ಮಿಲ್ಲರ್, ಪಂದ್ಯದ ಬಳಿಕ ಕ್ಷಮೆಯಾಚಿಸಿದ್ದು ವಿಶೇಷ. ಏಕೆಂದರೆ ಡೇವಿಡ್ ಮಿಲ್ಲರ್ ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು. 2020 ರಲ್ಲಿ ಆರ್ಆರ್ ತಂಡಕ್ಕೆ ಆಯ್ಕೆಯಾಗಿದ್ದ ಮಿಲ್ಲರ್ ಮೊದಲ ಸೀಸನ್ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡುವ ಅವಕಾಶ ಪಡೆದಿದ್ದರು. ಇನ್ನು ಐಪಿಎಲ್ 2021 ರಲ್ಲಿ ರಾಜಸ್ಥಾನ್ ಪರ 9 ಪಂದ್ಯಗಳನ್ನು ಆಡಿದ್ದ ಮಿಲ್ಲರ್ 189 ರನ್ ಗಳಿಸಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಮಿಲ್ಲರ್ ಅವರನ್ನು ಅಂತಿಮ ಸುತ್ತಿನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಖರೀದಿಸಿತು.
ಇದೀಗ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಮಾಜಿ ತಂಡದ ವಿರುದ್ದ ಕೇವಲ 38 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 68 ರನ್ ಬಾರಿಸುವ ಮೂಲಕ ಡೇವಿಡ್ ಮಿಲ್ಲರ್ ಅಬ್ಬರಿಸಿದ್ದಾರೆ. ಇತ್ತ ಗುಜರಾತ್ ತಂಡದ ಗೆಲುವಿನ ಖುಷಿಯ ನಡುವೆ ಮಿಲ್ಲರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಕ್ಷಮೆಯಾಚಿಸಿದ್ದಾರೆ. ಈ ಮೂಲಕ ತಮ್ಮ ಮಾಜಿ ತಂಡವನ್ನು ಗೌರವಿಸಿದ್ದಾರೆ.
ಐಪಿಎಲ್ 2022 ರಲ್ಲಿ ಮಿಲ್ಲರ್ ಕಿಲ್ಲರ್:
ಡೇವಿಡ್ ಮಿಲ್ಲರ್ ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 15 ಪಂದ್ಯಗಳನ್ನು ಆಡಿರುವ ಅವರು ಒಟ್ಟು 449 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ ಗುಜರಾತ್ ಟೈಟಾನ್ಸ್ ತಂಡದ ಫಿನಿಶರ್ ಜವಾಬ್ದಾರಿಯನ್ನು ಕಿಲ್ಲರ್ ಮಿಲ್ಲರ್ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇದಕ್ಕೆ ತಾಜಾ ಸಾಕ್ಷಿ ರಾಜಸ್ಥಾನ್ ರಾಯಲ್ಸ್ ವಿರುದ್ದದ ಮೊದಲ ಕ್ವಾಲಿಫೈಯರ್ ಪಂದ್ಯ. ಒಟ್ಟಿನಲ್ಲಿ ಡೇವಿಡ್ ಮಿಲ್ಲರ್ ಗುಜರಾತ್ ಟೈಟಾನ್ಸ್ ಪರ ಅಧ್ಭುತ ಪ್ರದರ್ಶನ ನೀಡುವ ಮೂಲಕ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.