ಜಗಳದ ವಿಡಿಯೋ ವೈರಲ್ ಬೆನ್ನಲ್ಲೇ ಪಿಎಸ್​ಎಲ್ ತೊರೆದ ಡೇವಿಡ್ ವಾರ್ನರ್

David Warner Returns to Australia from PSL: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡೇವಿಡ್ ವಾರ್ನರ್, ತಂಡ ಅಗ್ರಸ್ಥಾನದಲ್ಲಿದ್ದರೂ, ದಿಢೀರನೆ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಜಗಳದ ವಿಡಿಯೋ ವೈರಲ್ ಆದರೂ, ಇದು ಕೇವಲ ಸಣ್ಣ ವಿರಾಮ. ಮುಂದಿನ ಪಂದ್ಯಕ್ಕೂ ಮುನ್ನ ಅವರು ಪಾಕಿಸ್ತಾನಕ್ಕೆ ಮರಳಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ವಾರ್ನರ್, ಕರಾಚಿ ಕಿಂಗ್ಸ್‌ನಲ್ಲಿ ಯಾವುದೇ ಜಗಳ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಗಳದ ವಿಡಿಯೋ ವೈರಲ್ ಬೆನ್ನಲ್ಲೇ ಪಿಎಸ್​ಎಲ್ ತೊರೆದ ಡೇವಿಡ್ ವಾರ್ನರ್
David Warner

Updated on: Apr 03, 2026 | 8:01 PM

ವರ್ಷಗಳ ಕಾಲ ಐಪಿಎಲ್‌ನಲ್ಲಿ (IPL) ಅಬ್ಬರಿಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner) ಇದೀಗ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇದಕ್ಕೆ ಕಾರಣ ಹರಾಜಿನಲ್ಲಿ ಯಾರು ಅವರನ್ನು ಖರೀದಿಸಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ (PSL) ಆಡುತ್ತಿರುವ ವಾರ್ನರ್, ಕರಾಚಿ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇದುವರೆಗೆ ಹತ್ತು ಪಂದ್ಯಗಳು ನಡೆದಿದ್ದು, ಕರಾಚಿ ಕಿಂಗ್ಸ್ ತಂಡವು ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮಧ್ಯೆ, ಕರಾಚಿ ಕಿಂಗ್ಸ್ ನಾಯಕ ಡೇವಿಡ್ ವಾರ್ನರ್, ಲೀಗ್​ ತೊರೆದು ತವರಿಗೆ ಮರಳಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿವೆ.

ಆಸ್ಟ್ರೇಲಿಯಾಕ್ಕೆ ಹಾರಿದ ಡೇವಿಡ್ ವಾರ್ನರ್

ವಾಸ್ತವವಾಗಿ ಡೇವಿಡ್ ವಾರ್ನರ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೆಲ್ಲದರ ನಡುವೆ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ ಎಂಬ ಸುದ್ದಿ ಬಂದಿದೆ. ಆದಾಗ್ಯೂ ವಾರ್ನರ್ ಮನೆಗೆ ಮರಳಿರುವುದಕ್ಕೂ, ವೈರಲ್ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯ ಏಪ್ರಿಲ್ 9 ರಂದು ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೇಶಾವರ್ ಝಲ್ಮಿ ವಿರುದ್ಧ ನಡೆಯಲಿದೆ.

ಹೀಗಾಗಿ ಡೇವಿಡ್ ವಾರ್ನರ್ ಸಣ್ಣ ವಿರಾಮ ತೆಗೆದುಕೊಂಡು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ತಂಡದ ಮುಂದಿನ ಪಂದ್ಯಕ್ಕೆ ಇನ್ನು 6 ದಿನಗಳು ಬಾಕಿ ಇರುವುದರಿಂದ ವಾರ್ನರ್, ಈ ವಿರಾಮದ ಲಾಭವನ್ನು ಪಡೆದುಕೊಂಡು ಮನೆಗೆ ಮರಳಲು ನಿರ್ಧರಿಸಿದ್ದಾರೆ. ಇದರರ್ಥ ಅವರು ಕರಾಚಿ ಕಿಂಗ್ಸ್ ತಂಡದ ಮುಂದಿನ ಪಂದ್ಯಕ್ಕೂ ಮೊದಲು ಪಾಕಿಸ್ತಾನಕ್ಕೆ ಮರಳಲಿದ್ದು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಡೇವಿಡ್ ವಾರ್ನರ್ ನಾಯಕತ್ವದಲ್ಲಿ, ಕರಾಚಿ ಕಿಂಗ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಟ್ಸ್‌ಮನ್ ಆಗಿಯೂ ಉತ್ತಮ ಪ್ರದರ್ಶನ ನೀಡಿರುವ ವಾರ್ನರ್ ಆಡಿರುವ ಮೂರು ಪಂದ್ಯಗಳಲ್ಲಿ 31.00 ಸರಾಸರಿಯಲ್ಲಿ 93 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.

ವಾರ್ನರ್- ಅಲಿ ನಡುವೆ ಜಗಳ?

ಮೇಲೆ ಹೇಳಿದಂತೆ ಪಾಕಿಸ್ತಾನ ಸೂಪರ್ ಲೀಗ್ ಸಮಯದಲ್ಲಿ ಡೇವಿಡ್ ವಾರ್ನರ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ, ಅವರು ಮೊಯಿನ್ ಅಲಿ ಅವರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಇತ್ತ ಕರಾಚಿ ಕಿಂಗ್ಸ್ ತಂಡದ ನಿರ್ದೇಶಕ ಹೈದರ್ ಅಜರ್ ಕೂಡ ವಾರ್ನರ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ. ಹೀಗಾಗಿ ಇಬ್ಬರೂ ಜಗಳವಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದಾಗ್ಯೂ, ಡೇವಿಡ್ ವಾರ್ನರ್ ಈ ವದಂತಿಯನ್ನು ನಿರಾಕರಿಸಿದ್ದು, ಕರಾಚಿ ತಂಡದೊಳಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ವಾದವು ತಮಾಷೆಯಾಗಿತ್ತು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 pm, Fri, 3 April 26

Follow Us