ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸಂವಿಧಾನದಲ್ಲಿ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಬೇಕಿತ್ತು, ಆದರೆ ಈಗ ಈ ವಿಚಾರಣೆಯನ್ನು ಒಂದು ವಾರ ಮುಂದೂಡಲಾಗಿದೆ. ಇದೀಗ ಈ ವಿಷಯದ ಮುಂದಿನ ವಿಚಾರಣೆ ಜುಲೈ 28 ರಂದು ನಡೆಯಲಿದೆ. ಬಿಸಿಸಿಐನ ಪದಾಧಿಕಾರಿಗಳ ಅವಧಿಗೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯಲಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಹಿಂದಿನ ಅಮಿಕಸ್ ಕ್ಯೂರಿಯನ್ನು ಈಗ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ಮಾಡಲಾಗಿದೆ.
ಮನವಿಯಲ್ಲಿರುವುದೇನು?
ಪ್ರಸ್ತುತ ಬಿಸಿಸಿಐ ಸಂವಿಧಾನದ ಪ್ರಕಾರ, ಸತತ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಅಧಿಕಾರಿಗಳು ಕಚೇರಿಯಲ್ಲಿ ಮುಂದುವರಿಯುವಂತಿಲ್ಲ. ಇದರ ನಂತರ, ಅವರು ಮೂರು ವರ್ಷಗಳ ಕಾಲ ವಿರಾಮದಲ್ಲಿರಬೇಕಾಗುತ್ತದೆ. ಈ ಮೂರು ವರ್ಷದ ವಿರಾಮದ ನಂತರವೇ ಅವರು ಮತ್ತೆ ಯಾವುದೇ ರಾಜ್ಯ ಅಸೋಸಿಯೇಷನ್ ಅಥವಾ ಬಿಸಿಸಿಐನಲ್ಲಿ ಯಾವುದೇ ಸ್ಥಾನವನ್ನು ಹೊಂದಬಹುದು. ಆರು ವರ್ಷಗಳ ಅವಧಿಯು ರಾಜ್ಯ ಸಂಘ ಮತ್ತು ಬಿಸಿಸಿಐ ಎರಡನ್ನೂ ಒಳಗೊಂಡಿದೆ. ಹಾಗಾಗಿ ಈ ನಿಯಮವನ್ನು ತೆಗೆದುಹಾಕಬೇಕೆಂದು ಬಿಸಿಸಿಐ ಬಯಸಿದ್ದು ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಬಿಸಿಸಿಐ ತನ್ನ ಪ್ರಸ್ತಾವಿತ ತಿದ್ದುಪಡಿಯಲ್ಲಿ, ಪದಾಧಿಕಾರಿಗಳಿಗೆ ಕಡ್ಡಾಯ ವಿರಾಮ ಸಮಯವನ್ನು ತೆಗೆದುಹಾಕಲು ಅನುಮೋದನೆಯನ್ನು ಕೋರಿದೆ. ಇದು ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಆರು ವರ್ಷಗಳನ್ನು ಪೂರೈಸಿದ ನಂತರವೂ ಗಂಗೂಲಿ ಮತ್ತು ಷಾ ಅವರ ಸ್ಥಾನಗಳಲ್ಲಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ.
ಗಂಗೂಲಿ ಮತ್ತು ಶಾ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ
ಇದಕ್ಕೂ ಮೊದಲು, ನ್ಯಾಯಮೂರ್ತಿ ಆರ್‌ಎಂ ಲೋಧಾ ನೇತೃತ್ವದ ಸಮಿತಿಯು ಬಿಸಿಸಿಐನಲ್ಲಿ ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿತ್ತು, ಅದನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತು. ಶಿಫಾರಸುಗಳ ಪ್ರಕಾರ, ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಬಿಸಿಸಿಐ ಮಟ್ಟದಲ್ಲಿನ ಪದಾಧಿಕಾರಿಗಳು ಆರು ವರ್ಷಗಳ ಅಧಿಕಾರಾವಧಿಯ ನಂತರ ಮೂರು ವರ್ಷಗಳ ವಿರಾಮವನ್ನು ತೆಗೆದುಕೊಳ್ಳಬೇಕಾಗುತ್ತದೆ (ಈ 3 ವರ್ಷಗಳ ಅವಧಿಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಬಿಸಿಸಿಐ ಮಟ್ಟದಲ್ಲಿ ಯಾವುದೇ ಅಧಿಕಾರವಹಿಸಿಕೊಳ್ಳುವಂತಿಲ್ಲ).
ಸುಪ್ರೀಂ ಕೋರ್ಟ್ ಅನುಮೋದಿಸಿದ ಬಿಸಿಸಿಐನ ಸಂವಿಧಾನದ ಪ್ರಕಾರ, ಒಬ್ಬ ಪದಾಧಿಕಾರಿಯು ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಬಿಸಿಸಿಐನಲ್ಲಿ ಮೂರು ವರ್ಷಗಳ ಸತತ ಎರಡು ಅವಧಿಯನ್ನು ಪೂರ್ಣಗೊಳಿಸಿದರೆ, ಅವರು ಮೂರು ವರ್ಷಗಳ ಕಡ್ಡಾಯ ವಿರಾಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಗಂಗೂಲಿ ಅವರು ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಪದಾಧಿಕಾರಿಯಾಗಿದ್ದರು ಮತ್ತು ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿದ್ದರು. ಹೀಗಾಗಿ ಈಗಿರುವ ನಿಯಮದ ಪ್ರಕಾರ ಈ ಇಬ್ಬರು ಈಗ ಬಿಸಿಸಿಐನಿಂದ ಹೊರನಡೆಯಬೇಕಿದೆ.
Published On - 7:57 pm, Thu, 21 July 22