ಟಿ20 ಕ್ರಿಕೆಟ್ನಲ್ಲಿ ಡೆತ್ ಓವರ್ಗಳು ಇಡೀ ಪಂದ್ಯದ ಚಿತ್ರಣ ಬದಲಿಸಬಹುದು. ಇದಕ್ಕೆ ಅತ್ಯುತ್ತಮ ಸಾಕ್ಷಿ, ಕಳೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ವಿರುದ್ಧ ವಿರಾಟ್ ಕೊಹ್ಲಿ (Virat Kohli) ಹಾಗೂ ಟೀಮ್ ಇಂಡಿಯಾ ಆಟಗಾರರು ಕೊನೆಯ 18 ಎಸೆತಗಳಲ್ಲಿ 48 ರನ್ ಸಿಡಿಸಿ ರೋಚಕ ಗೆಲುವು ದಾಖಲಿಸಿರುವುದು. ಅತ್ತ ಪಾಕ್ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ಗಳ ಬೆಂಡೆತ್ತಿದ ಟೀಮ್ ಇಂಡಿಯಾಗೂ ಅದೇ ಸಮಸ್ಯೆ ಕಾಡುತ್ತಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿಯೇ ಅರ್ಷದೀಪ್ ಸಿಂಗ್ ಅವರ ಈ ಅಂಕಿ ಅಂಶಗಳು.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 18ನೇ ಮತ್ತು 20ನೇ ಓವರ್ ಬೌಲಿಂಗ್ ಮಾಡಿದ್ದರು. 17ನೇ ಓವರ್ ಮುಕ್ತಾಯದ ವೇಳೆಗೆ ಐರ್ಲೆಂಡ್ ಕಲೆಹಾಕಿದ್ದು ಕೇವಲ 114 ರನ್ಗಳು ಮಾತ್ರ. ಇನ್ನು 18ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ನೀಡಿದ್ದು ಕೇವಲ 2 ರನ್ ಮಾತ್ರ.
ಆದರೆ ಇದೇ ಅರ್ಷದೀಪ್ ಸಿಂಗ್ 20ನೇ ಓವರ್‌ನಲ್ಲಿ ಚಚ್ಚಿಸಿಕೊಂಡಿದ್ದು ಬರೋಬ್ಬರಿ 22 ರನ್ಗಳು. ಹೀಗೆ 22 ರನ್ಗಳನ್ನು ಕಲೆಹಾಕಿರುವುದು ಬ್ಯಾಟಿಂಗ್ಗೆ ಇಳಿದ ಬೌಲರ್ಗಳು ಎಂಬುದು ಇಲ್ಲಿ ಉಲ್ಲೇಖಾರ್ಹ.
ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಅರ್ಷದೀಪ್ ಸಿಂಗ್ ಪವರ್ಪ್ಲೇನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಆದರೆ ಕೊನೆಯ ಓವರ್‌ಗಳಲ್ಲಿ ಅತೀ ಹೆಚ್ಚು ರನ್ ನೀಡುತ್ತಾರೆ ಎಂಬುದು. ಟೀಮ್ ಇಂಡಿಯಾ ಪರ ಇದುವರೆಗೆ 32 ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಅರ್ಷದೀಪ್ ಸಿಂಗ್ 19ನೇ ಮತ್ತು 20ನೇ ಓವರ್‌ನಲ್ಲಿ 12.73 ರ ಸರಾಸರಿಯಲ್ಲಿ ಒಟ್ಟು 244 ರನ್ ಬಿಟ್ಟು ಕೊಟ್ಟಿದ್ದಾರೆ. ಈ ವೇಳೆ ಒಟ್ಟು 15 ಸಿಕ್ಸ್ಗಳನ್ನು ಕೂಡ ಹೊಡೆಸಿಕೊಂಡಿದ್ದಾರೆ.
ಯುವ ಎಡಗೈ ವೇಗಿ ಐಪಿಎಲ್‌ನಲ್ಲಿ ಅತ್ಯುತ್ತಮ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಐಪಿಎಲ್‌ನಲ್ಲಿ ಕೊನೆಯ ನಾಲ್ಕು ಓವರ್‌ಗಳಲ್ಲಿ 8.98 ಎಕಾನಮಿ ರೇಟ್ನಲ್ಲಿ ಮಾತ್ರ ರನ್ ನೀಡಿದ್ದಾರೆ. ಅಲ್ಲದೆ 28 ಇನಿಂಗ್ಸ್ಗಳಲ್ಲಿ ಡೆತ್ ಓವರ್ ಮಾಡಿರುವ ಅರ್ಷದೀಪ್ ಸಿಂಗ್ ಒಟ್ಟು 27 ವಿಕೆಟ್ಗಳನ್ನು ಪಡೆದಿದ್ದಾರೆ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಡೆತ್ ಓವರ್ ವೇಳೆ ಚೆಂಡನ್ನು ಅರ್ಷದೀಪ್ ಸಿಂಗ್ಗೆ ನೀಡಲಾಗುತ್ತಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದೇ ನನ್ನ ಗುರಿ: ನಸೀಮ್ ಶಾ
ಆದರೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವಾಗ ಅರ್ಷದೀಪ್ ಸಿಂಗ್ 19ನೇ ಅಥವಾ 20ನೇ ಓವರ್‌ನಲ್ಲಿ ದುಬಾರಿಯಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ 19ನೇ ಮತ್ತು 20ನೇ ಓವರ್‌ಗಳಲ್ಲಿ 12.73 ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿರುವುದು. ಇದೀಗ ಟೀಮ್ ಇಂಡಿಯಾಗೆ ಬುಮ್ರಾ ಆಗಮನವಾಗಿದ್ದು, ಹೀಗಾಗಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆಯಾ ಕಾದು ನೋಡಬೇಕಿದೆ.