ಟೀಮ್ ಇಂಡಿಯಾ ವಿರುದ್ಧ ಸೋತರೂ ದಾಖಲೆ ಬರೆದ ಐರ್ಲೆಂಡ್
Ireland vs India: ಈ ಪಂದ್ಯದಲ್ಲಿ ಸೋತರೂ ಐರ್ಲೆಂಡ್ ತಂಡ ಟೀಮ್ ಇಂಡಿಯಾ ವಿರುದ್ಧ ವಿಶೇಷ ದಾಖಲೆಯೊಂದನ್ನು ಬರೆದಿದೆ. ಅದು ಕೂಡ ಕೆಚ್ಚೆದೆಯ ಪ್ರದರ್ಶನದ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
ಡಬ್ಲಿನ್ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ಟೀಮ್ ಇಂಡಿಯಾ ದಾಳಿಗೆ ತತ್ತರಿಸಿತು. ಮೊದಲ ಓವರ್ನಲ್ಲೇ 2 ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬುಮ್ರಾ ಜೊತೆಗೂಡಿದ ಪ್ರಸಿದ್ಧ್ ಕೃಷ್ಣ ಕೂಡ ವಿಕೆಟ್ ಕಬಳಿಸಿದರು. ಪರಿಣಾಮ ಐರ್ಲೆಂಡ್ ತಂಡವು ಕೇವಲ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಐರ್ಲೆಂಡ್ ತಂಡ 139 ರನ್ಗಳಿಸಿತು. ಇತ್ತ 140 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ 6.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇನ್ನು ಫಲಿತಾಂಶ ನಿರ್ಧಾರಕ್ಕೆ ಡಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಟೀಮ್ ಇಂಡಿಯಾ 2 ರನ್ಗಳಿಂದ ಮುಂದಿದ್ದರಿಂದ ವಿಜಯಿ ಎಂದು ಘೋಷಿಸಲಾಯಿತು.
ಐರ್ಲೆಂಡ್ ವಿಶೇಷ ದಾಖಲೆ:
ವಿಶೇಷ ಎಂದರೆ ಈ ಪಂದ್ಯದಲ್ಲಿ ಸೋತರೂ ಐರ್ಲೆಂಡ್ ತಂಡವು ಟೀಮ್ ಇಂಡಿಯಾ ವಿರುದ್ಧ ದಾಖಲೆಯೊಂದನ್ನು ಬರೆದಿದೆ. ಅದು ಕೂಡ ಕೆಚ್ಚೆದೆಯ ಪ್ರದರ್ಶನದ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಹ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ಕೇವಲ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಬರೋಬ್ಬರಿ 108 ರನ್ ಬಾರಿಸಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕಡಿಮೆ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಭಾರತದ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ತಂಡ ಎಂಬ ಐರ್ಲೆಂಡ್ ಪಾಲಾಯಿತು.
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಕಡಿಮೆ ಮೊತ್ತಕ್ಕೆ 5 ವಿಕೆಟ್ ಪತನಗೊಂಡ ಬಳಿಕ ಅತೀ ಹೆಚ್ಚು ರನ್ ಬಾರಿಸಿದ ತಂಡಗಳ ಪಟ್ಟಿಯ ಮೊದಲೆರಡು ಸ್ಥಾನಗಳನ್ನೂ ಐರ್ಲೆಂಡ್ ತನ್ನದಾಗಿಸಿಕೊಂಡಿದೆ.
- 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 25 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಬಳಿಕ ಐರ್ಲೆಂಡ್ ಒಟ್ಟು 137 ರನ್ ಕಲೆಹಾಕಿದ್ದರು. ಅಂದರೆ ಉಳಿದ ಬ್ಯಾಟರ್ಗಳು ಸೇರಿ ಒಟ್ಟು 112 ರನ್ ಬಾರಿಸಿದ್ದರು. ಇದು ವಿಶ್ವ ದಾಖಲೆಯಾಗಿದೆ.
- ಇದೀಗ ಟೀಮ್ ಇಂಡಿಯಾ ವಿರುದ್ಧ ಕೂಡ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಬಳಿಕ ಐರ್ಲೆಂಡ್ ಬ್ಯಾಟರ್ಗಳು ಒಟ್ಟು 108 ರನ್ ಕಲೆಹಾಕಿದ್ದಾರೆ.
ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಕಡಿಮೆ ರನ್ಗಳಿಗೆ 5 ವಿಕೆಟ್ ಕಳೆದುಕೊಂಡು, ಆ ಬಳಿಕ ನೂರಕ್ಕೂ ಹೆಚ್ಚು ರನ್ ಬಾರಿಸಿದ ತಂಡಗಳ ಪಟ್ಟಿಯಲ್ಲಿ ಐರ್ಲೆಂಡ್ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ.
ಐರ್ಲೆಂಡ್ ಪ್ಲೇಯಿಂಗ್ 11: ಪಾಲ್ ಸ್ಟಿರ್ಲಿಂಗ್ (ನಾಯಕ) , ಆಂಡ್ರ್ಯೂ ಬಾಲ್ಬಿರ್ನಿ , ಲೋರ್ಕನ್ ಟಕರ್ (ವಿಕೆಟ್ ಕೀಪರ್) , ಹ್ಯಾರಿ ಟೆಕ್ಟರ್ , ಕರ್ಟಿಸ್ ಕ್ಯಾಂಫರ್ , ಜಾರ್ಜ್ ಡಾಕ್ರೆಲ್ , ಮಾರ್ಕ್ ಅಡೇರ್ , ಬ್ಯಾರಿ ಮೆಕಾರ್ಥಿ , ಕ್ರೇಗ್ ಯಂಗ್ , ಜೋಶುವಾ ಲಿಟಲ್ , ಬೆಂಜಮಿನ್ ವೈಟ್.
ಇದನ್ನೂ ಓದಿ: ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರುವ 4 ತಂಡಗಳನ್ನು ಹೆಸರಿಸಿದ ಎಬಿಡಿ
ಭಾರತ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ , ಯಶಸ್ವಿ ಜೈಸ್ವಾಲ್ , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ತಿಲಕ್ ವರ್ಮಾ , ರಿಂಕು ಸಿಂಗ್ , ಶಿವಂ ದುಬೆ , ವಾಷಿಂಗ್ಟನ್ ಸುಂದರ್ , ಪ್ರಸಿದ್ಧ್ ಕೃಷ್ಣ , ಅರ್ಷದೀಪ್ ಸಿಂಗ್ , ಜಸ್ಪ್ರೀತ್ ಬುಮ್ರಾ (ನಾಯಕ) , ರವಿ ಬಿಷ್ಣೋಯ್.