ಏಷ್ಯಾಕಪ್ಗೂ ಮುನ್ನ ಪಾಕಿಸ್ತಾನ್ ಆಟಗಾರರ ಹೊಸ ಡಿಮ್ಯಾಂಡ್..!
ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಐಸಿಸಿಯಿಂದ ಮಾರಾಟವಾಗುವ ಪಂದ್ಯಗಳ ನೇರ ಪ್ರಸಾರದ ಡಿಜಿಟಲ್ ಹಕ್ಕುಗಳಿಂದ ಪಾಕಿಸ್ತಾನ್ ಕ್ರಿಕೆಟ್ ಆದಾಯವನ್ನು ಪಡೆಯುತ್ತಿದೆ. ಹಾಗೆಯೇ ಖಾಸಗಿ ಕಂಪೆನಿಗಳಿಗೆ ಪಂದ್ಯಗಳ ಡಿಜಿಟಲ್ ಕ್ಲಿಪ್ಸ್ ಹಾಗೂ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸುತ್ತಿದೆ.
ಬಹುನಿರೀಕ್ಷಿತ ಏಷ್ಯಾಕಪ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಆದರೆ ಅತ್ತ ಟೂರ್ನಿ ಆಯೋಜಿಸಲಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹಾಗೂ ಪಾಕ್ ಆಟಗಾರರು ನಡುವೆ ಭಿನ್ನಾಪ್ರಾಯ ಮೂಡಿದೆ. ಪಾಕಿಸ್ತಾನ್ ಆಟಗಾರರ ಕೇಂದ್ರೀಯ ಒಪ್ಪಂದ ಈಗಾಗಲೇ ಮುಗಿದಿದ್ದು, ಇದಾಗ್ಯೂ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಆಟಗಾರರು ಹಿಂದೇಟು ಹಾಕಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಡಿಜಿಟಲ್ ಹಕ್ಕುಗಳ ಆದಾಯವನ್ನು ಆಟಗಾರರ ಸಂಭಾವನೆಯಲ್ಲಿ ಪರಿಗಣಿಸದಿರುವುದು. ಅಂದರೆ ಪಿಸಿಬಿ ಪ್ರಮುಖ ಟೂರ್ನಿಗಳ ಡಿಜಿಟಲ್ ಪ್ರಸಾರ ಹಕ್ಕುಗಳಿಂದ ಉತ್ತಮ ಆದಾಯವನ್ನು ಪಡೆಯುತ್ತಿದೆ. ಆದರೆ ಈ ಆದಾಯದ ಲಾಭಾಂಶಗಳಲ್ಲಿ ಆಟಗಾರರಿಗೆ ಯಾವುದೇ ಪಾಲನ್ನು ನೀಡುತ್ತಿಲ್ಲ. ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ತಂಡದ ಆಟಗಾರರು ಹೊಸ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ.
ಶ್ರೀಲಂಕಾದಲ್ಲಿ ಪಾಕಿಸ್ತಾನ್ ತಂಡ:
ಏಷ್ಯಾಕಪ್ಗೂ ಮುನ್ನ ಪೂರ್ವಭಾವಿ ಪಂದ್ಯವಾಡಲು ಪಾಕಿಸ್ತಾನ್ ತಂಡ ಈಗಾಗಲೇ ಶ್ರೀಲಂಕಾಗೆ ತೆರಳಿದೆ. ಅಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಗೂ ಮುನ್ನ ಆಟಗಾರರ ಜೊತೆಗಿನ ಹೊಸ ಕೇಂದ್ರೀಯ ಒಪ್ಪಂದವನ್ನು ಪೂರ್ಣಗೊಳಿಸಲು ಪಿಸಿಬಿ ಮುಂದಾಗಿತ್ತು. ಆದರೆ ಇದೀಗ ಒಪ್ಪಂದಕ್ಕೆ ಸಹಿ ಹಾಕಲು ಪಾಕ್ ಆಟಗಾರರು ಹಿಂದೇಟು ಹಾಕಿರುವುದು ಪಿಸಿಬಿಯನ್ನು ಚಿಂತೆಗೀಡು ಮಾಡಿದೆ.
ಪಾಕ್ ಆಟಗಾರರ ಹೊಸ ಡಿಮ್ಯಾಂಡ್:
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಪ್ಪಂದವನ್ನು ಮುಂದುವರೆಸಲು ಮುಂದಾಗುತ್ತಿದ್ದಂತೆ ಆಟಗಾರರು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಈ ಬೇಡಿಕೆಯಂತೆ ಡಿಜಿಟಲ್ ಹಕ್ಕುಗಳ ಮಾರಾಟದಿಂದ ಸಿಗುವ ಲಾಭವನ್ನು ಕೂಡ ತಮ್ಮ ವೇತನದಲ್ಲಿ ಸೇರಿಸಬೇಕೆಂದು ತಿಳಿಸಿದ್ದಾರೆ.
ಇತರೆ ಕ್ರಿಕೆಟ್ ಮಂಡಳಿಗಳು ಡಿಜಿಟಲ್ ಹಕ್ಕುಗಳಿಂದ ಬರುವ ಆದಾಯದ ಹಂಚಿಕೆಯಲ್ಲಿ ಆಟಗಾರರೊಂದಿಗೆ ಸರಿಯಾದ ಒಪ್ಪಂದವನ್ನು ಹೊಂದಿವೆ. ಆದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾತ್ರ ಡಿಜಿಟಲ್ ಆದಾಯವನ್ನು ಆಟಗಾರರಿಗೆ ನೀಡುತ್ತಿಲ್ಲ. ಹೀಗಾಗಿ ಹೊಸ ಒಪ್ಪಂದಕ್ಕೂ ಮುನ್ನ ಈ ಬಗ್ಗೆ ತೀರ್ಮಾನವಾಗಬೇಕೆಂದು ಪಾಕ್ ಆಟಗಾರರು ಪಟ್ಟು ಹಿಡಿದಿದ್ದಾರೆ.
ಏನಿದು ಡಿಜಿಟಲ್ ಆದಾಯ:
ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಐಸಿಸಿಯಿಂದ ಮಾರಾಟವಾಗುವ ಪಂದ್ಯಗಳ ನೇರ ಪ್ರಸಾರದ ಡಿಜಿಟಲ್ ಹಕ್ಕುಗಳಿಂದ ಪಾಕಿಸ್ತಾನ್ ಕ್ರಿಕೆಟ್ ಆದಾಯವನ್ನು ಪಡೆಯುತ್ತಿದೆ. ಹಾಗೆಯೇ ಖಾಸಗಿ ಕಂಪೆನಿಗಳಿಗೆ ಪಂದ್ಯಗಳ ಡಿಜಿಟಲ್ ಕ್ಲಿಪ್ಸ್ ಹಾಗೂ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸುತ್ತಿದೆ. ಇದಲ್ಲದೆ ಸೋಷಿಯಲ್ ಮೀಡಿಯಾದಿಂದಲೂ ಪಿಸಿಬಿ ಉತ್ತಮ ಆದಾಯವನ್ನು ಪಡೆಯುತ್ತಿದೆ.
ಇದನ್ನೂ ಓದಿ: Team India: ಶತಕ ಬಾರಿಸದೇ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಈ ಆದಾಯಗಳಿಂದ ತಮಗೂ ಪಾಲು ಸಿಗಬೇಕೆಂಬ ಬೇಡಿಕೆಯನ್ನು ಪಾಕಿಸ್ತಾನ್ ಆಟಗಾರರು ಮುಂದಿಟ್ಟಿದ್ದಾರೆ. ಆದರೆ ಈ ಬಗ್ಗೆ ಪಿಸಿಬಿ ಇನ್ನೂ ಕೂಡ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇತ್ತ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ಗೂ ಮುನ್ನ ಪಾಕ್ ಆಟಗಾರರ ಹೊಸ ಬೇಡಿಕೆಯು ಇದೀಗ ಪಿಸಿಬಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.