ಟೀಮ್ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ (IND vs WI) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ಆಲ್ರೌಂಡರ್ ದೀಪಕ್ ಹೂಡಾ ಅವರು ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ. ಇದೀಗ ಇದೇ ವಿಚಾರವನ್ನು ಮುಂದಿಟ್ಟು ಭಾರತೀಯ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐ ಅನ್ನು ಟ್ರೋಲ್ ಮಾಡುತ್ತಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿರಲಿಲ್ಲ. ಅವರ ಸ್ಥಾನದಲ್ಲಿ ಅವೇಶ್ ಖಾನ್ ಏಕದಿನ ತಂಡದ ಪರ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಇದಾಗ್ಯೂ ಪ್ರಸಿದ್ಧ್ ಹೆಸರು ಮೈದಾನದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದು ದೀಪಕ್ ಹೂಡಾ. ಕೈಲ್ ಮೇಯರ್ಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಹೂಡಾ ವಿಂಡೀಸ್ನ ಮೊದಲ ವಿಕೆಟ್ ಉರುಳಿಸಿದ್ದರು. ಆದರೆ ಹೂಡಾ ಅವರ ಈ ವಿಕೆಟ್‌ಗಿಂತ ಜೆರ್ಸಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಿತು. ಪಂದ್ಯದ ಆರಂಭದಲ್ಲಿ, ಹೂಡಾ ಅವರ ಜೆರ್ಸಿಯ ಹಿಂಭಾಗದಲ್ಲಿ ಟೇಪ್ ಅಂಟಿಸಲಾಗಿತ್ತು. ಆಟ ಮುಂದುವರೆದಂತೆ, ಹೂಡಾ ಅವರ ಜರ್ಸಿಯಿಂದ ಟೇಪ್ ಬಿದ್ದಿದೆ. ಆ ಬಳಿಕ ಜೆರ್ಸಿಯ ಮೇಲೆ ಪ್ರಸಿದ್ಧ್ ಕೃಷ್ಣ ಅವರ ಹೆಸರು ಕಾಣಿಸಿಕೊಂಡಿದೆ.
ದೀಪಕ್ ಹೂಡಾ ಅವರ ಜೆರ್ಸಿಯ ಮೇಲೆ ಪ್ರಸಿದ್ಧ್ ಕೃಷ್ಣರ ಹೆಸರನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಎಲ್ಲಾ ಆಟಗಾರರಿಗೆ ಜೆರ್ಸಿ ಕೊಡಿಸುವಷ್ಟು ಬಡವಾಗಿದೆಯೇ? ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ವೆಸ್ಟ್ ಇಂಡೀಸ್ ಪ್ರವಾಸವನ್ನು ಬಿಸಿಸಿಐ ಬಜೆಟ್ ಪ್ರವಾಸ ಮಾಡಿದ್ದಾರೆ…ಹೀಗಾಗಿಯೇ ಒಂದೇ ಜೆರ್ಸಿಯಲ್ಲಿ ಇಬ್ಬರಿಬ್ಬರು ಕಾಣಿಸಿಕೊಳ್ತಿದ್ದಾರೆ ಎಂದು ಕಮೆಂಟಿಸಿದ್ದಾರೆ.
ಇದೀಗ ಈ ಬಗ್ಗೆ ನಾನಾ ಮೀಮ್ಸ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲೊಬ್ಬರು ಟೀಮ್ ಇಂಡಿಯಾಗೆ ಲಾಂಡ್ರಿ ಸಮಸ್ಯೆ ಎದುರಾಗಿದೆ. ದಯವಿಟ್ಟು ಆಟಗಾರರು ಪರಸ್ಪರ ಜೆರ್ಸಿ ವಿನಿಮಯ ಮಾಡಿಕೊಳ್ಳಬೇಕಾಗಿ ವಿನಂತಿ ಎಂದು ಕಿಚಾಯಿಸಿದ್ದಾರೆ. ಇದಾಗ್ಯೂ ದೀಪಕ್ ಹೂಡಾ ಪ್ರಸಿದ್ಧ್ ಕೃಷ್ಣ ಅವರ ಜೆರ್ಸಿಯಲ್ಲಿ ಯಾಕೆ ಕಣಕ್ಕಿಳಿದರೂ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಹೂಡಾ ತಮ್ಮದೇ ಜೆರ್ಸಿಯಲ್ಲಿ ಆಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಇದಾಗ್ಯೂ 2ನೇ ಪಂದ್ಯದಲ್ಲಿ ಜೆರ್ಸಿ ಬದಲಾಯಿಸಿದ್ದೇಕೆ ಎಂಬುದೇ ಅಭಿಮಾನಿಗಳ ಪ್ರಶ್ನೆ.
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 312 ರನ್ಗಳ ಟಾರ್ಗೆಟ್ ಅನ್ನು ಅಕ್ಷರ್ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್ ಸಹಾಯದಿಂದ ಟೀಮ್ ಇಂಡಿಯಾ 49.4 ಓವರ್ಗಳಲ್ಲಿ ಚೇಸ್ ಮಾಡಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.