IPL 2022: ಅಕ್ಷರ್ ಅಬ್ಬರ, ಲಲಿತ್ ಮಿಂಚಿಂಗ್: ಬಲಿಷ್ಠ ಮುಂಬೈಗೆ ಸೋಲುಣಿಸಿದ ಡೆಲ್ಲಿ ಹುಡುಗ್ರು

| Updated By: ಝಾಹಿರ್ ಯೂಸುಫ್

Updated on: Mar 27, 2022 | 7:42 PM

Delhi Capitals vs Mumbai Indians: ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅಬ್ಬರಿಸಿದ್ದರು. ಮೊದಲ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದ ಹಿಟ್​ಮ್ಯಾನ್-ಕಿಶನ್ ಜೋಡಿ ತಂಡಕ್ಕೆಉತ್ತಮ ಆರಂಭ ಒದಗಿಸಿದ್ದರು.

IPL 2022: ಅಕ್ಷರ್ ಅಬ್ಬರ, ಲಲಿತ್ ಮಿಂಚಿಂಗ್: ಬಲಿಷ್ಠ ಮುಂಬೈಗೆ ಸೋಲುಣಿಸಿದ ಡೆಲ್ಲಿ ಹುಡುಗ್ರು
Delhi Capitals vs Mumbai Indians
Follow us on

ಐಪಿಎಲ್​ನ ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ದ ಕೆಕೆಆರ್ ಸುಲಭ ಜಯ ಸಾಧಿಸಿತ್ತು. ಇತ್ತ ಭರ್ಜರಿ ಪೈಪೋಟಿ ನಿರೀಕ್ಷಿಸಿದ್ದ ಅಭಿಮಾನಿಗಳಿಗೂ ನಿರಾಸೆಯಾಗಿತ್ತು. ಆದರೆ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಹೋರಾಟದೊಂದಿಗೆ ಜಯ ಸಾಧಿಸಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಒದಗಿಸಿದೆ. ಒಂದು ಹಂತದಲ್ಲಿ 72 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂತಿಮವಾಗಿ 4 ವಿಕೆಟ್​ಗಳ ಜಯ ಸಾಧಿಸಿದ್ದು ವಿಶೇಷ. ಈ ಗೆಲುವಿನ ರೂವಾರಿಗಳು ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಐದು ವಿಕೆಟ್‌ ನಷ್ಟಕ್ಕೆ 177 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ 13.2 ಓವರ್‌ಗಳಲ್ಲಿ 104 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಯಾದ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 6 ಓವರ್​ಗಳಲ್ಲಿ 60 ಕ್ಕೂ ಅಧಿಕ ರನ್​ಗಳಿಸಬೇಕಿದ್ದ ಸಮಯದಲ್ಲಿ ಒತ್ತಡವನ್ನು ನಿಭಾಯಿಸಿಕೊಂಡ ಈ ಜೋಡಿ ರನ್​ಗಳಿಸುತ್ತಾ ಹೋದರು. ಅದರಲ್ಲೂ ಡೇನಿಯಲ್ ಸ್ಯಾಮ್ಸ್ ಎಸೆದ 18ನೇ ಓವರ್​ನಲ್ಲಿ 24 ರನ್​ ಬಾರಿಸುವ ಮೂಲಕ ಈ ಜೋಡಿ ಅಬ್ಬರಿಸಿದರು. ಅಂತಿಮ 2 ಓವರ್​ನಲ್ಲಿ ಕೇವಲ 3 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಫೋರ್ ಬಾರಿಸುವ ಮೂಲಕ ಅಕ್ಷರ್ ಪಟೇಲ್ ಡೆಲ್ಲಿ ತಂಡಕ್ಕೆ 4 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

ಡೆಲ್ಲಿ ಪರ ಅಜೇಯರಾಗಿ ಉಳಿದ ಲಲಿತ್ ಯಾದವ್ (48) ಮತ್ತು ಅಕ್ಷರ್ ಪಟೇಲ್ (38, 17 ಎಸೆತ) ಏಳನೇ ವಿಕೆಟ್‌ಗೆ 30 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟವಾಡುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು.

ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅಬ್ಬರಿಸಿದ್ದರು. ಮೊದಲ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದ ಹಿಟ್​ಮ್ಯಾನ್-ಕಿಶನ್ ಜೋಡಿ ತಂಡಕ್ಕೆಉತ್ತಮ ಆರಂಭ ಒದಗಿಸಿದ್ದರು. ಈ ವೇಳೆ ರೋಹಿತ್ ಶರ್ಮಾ (41) ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅನ್​ಮೋಲ್ ಪ್ರೀತ್ ಸಿಂಗ್ (8) ಹಾಗೂ ತಿಲಕ್ ವರ್ಮಾ (22), ಕೀರನ್ ಪೊಲಾರ್ಡ್ (3) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮತ್ತೊಂದೆಡೆ ಅಬ್ಬರಿಸುವ ಮೂಲಕ ಇಶಾನ್ ಕಿಶನ್ ಮುಂಬೈ ತಂಡಕ್ಕೆ ಆಸರೆಯಾಗಿ ನಿಂತರು.

ಅದರಂತೆ ಸಿಕ್ಸ್​ ಫೋರ್​ಗಳ ಸುರಿಮಳೆಗೈಯ್ಯುತ್ತಾ ಕಿಶನ್ ಅರ್ಧಶತಕ ಪೂರೈಸಿದ್ದರು. ಅಲ್ಲದೆ 48 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 81 ರನ್​ಗಳಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಮೊತ್ತವನ್ನು 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ಕ್ಕೆ ತಂದು ನಿಲ್ಲಿಸಿದ್ದರು. ಇದಾಗ್ಯೂ ಲಲಿತ್ ಯಾದವ್ (48) ಮತ್ತು ಅಕ್ಷರ್ ಪಟೇಲ್ (38) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11:
ಪೃಥ್ವಿ ಶಾ , ಟಿಮ್ ಸೈಫರ್ಟ್ , ಮನದೀಪ್ ಸಿಂಗ್ , ರಿಷಬ್ ಪಂತ್ (ನಾಯಕ) , ರೋವ್ಮನ್ ಪೊವೆಲ್ , ಲಲಿತ್ ಯಾದವ್ , ಅಕ್ಷರ್ ಪಟೇಲ್ , ಶಾರ್ದೂಲ್ ಠಾಕೂರ್ , ಖಲೀಲ್ ಅಹ್ಮದ್ , ಕುಲದೀಪ್ ಯಾದವ್ , ಕಮಲೇಶ್ ನಾಗರಕೋಟಿ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11:
ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್, ತಿಲಕ್ ವರ್ಮಾ , ಅನ್ಮೋಲ್ಪ್ರೀತ್ ಸಿಂಗ್ , ಕೀರನ್ ಪೊಲಾರ್ಡ್ , ಟಿಮ್ ಡೇವಿಡ್ , ಡೇನಿಯಲ್ ಸಾಮ್ಸ್ , ಮುರುಗನ್ ಅಶ್ವಿನ್ , ಜಸ್ಪ್ರೀತ್ ಬುಮ್ರಾ , ಟೈಮಲ್ ಮಿಲ್ಸ್ , ಬೇಸಿಲ್ ಥಂಪಿ

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು