ಟೀಂ ಇಂಡಿಯಾ (Team India) ಮಾಜಿ ನಾಯಕ ಎಂಎಸ್ ಧೋನಿ, ಹಾಲಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ (MS Dhoni, Rohit Sharma and Virat Kohli ) ಅವರ ಪುತ್ರಿಯರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಾಚ್ಯ ಪದ ಬಳಸಿ ಕೊಳಕು ಕಾಮೆಂಟ್ ಮಾಡುವವರಿಗೆ ಕಡಿವಾಣ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೂಡ ಆರಂಭಿಸಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ಟ್ವೀಟ್ ನಂತರ ದೆಹಲಿ ಪೊಲೀಸರು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕೊಹ್ಲಿ ಹಾಗೂ ಧೋನಿ ಪುತ್ರಿಯರ ವಿರುದ್ಧ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ವಾತಿ ಮಲಿವಾಲ್ ನೋಟಿಸ್ ಕೂಡ ನೀಡಿದ್ದರು.ಇದರೊಂದಿಗೆ ಟ್ವಿಟರ್ ಸಂಸ್ಥೆಗೆ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಬಳಿಕ ಬರ್ತ್ ಡೇ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಕೊಹ್ಲಿ ದಂಪತಿಗಳು ಹಂಚಿಕೊಂಡಿದ್ದ ಫೋಟೋ ಬಗ್ಗೆ ಕೆಲವು ನೆಟ್ಟಿಗರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಜೊತೆಗೆ ಧೋನಿ ಹಾಗೂ ರೋಹಿತ್ ಶರ್ಮಾ ಪುತ್ರಿಯರ ಫೋಟೋಗಳಿಗೂ ಇದೇ ರೀತಿಯಾಗಿ ಕಾಮೆಂಟ್ ಮಾಡಲಾಗಿತ್ತು. ಈ ರೀತಿಯ ಹೀನ ಕೃತ್ಯವನ್ನು ಗಮನಿಸಿದ ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಸ್ಟಾರ್ ಕ್ರಿಕೆಟಿಗರ ಪುತ್ರಿಯರ ಫೋಟೋಗಳ ಮೇಲೆ ಕೆಲವು ನೆಟ್ಟಿಗರು ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು.
जिस तरह कोहली और धोनी की बच्चियों के बारे में भद्दी टिप्पणियाँ ट्विटर पर की जा रही हैं उसी तरह #RohitSharma की पत्नी और बच्ची को भी अभद्रता का निशाना बनाया जा रहा है। चल क्या रहा है ये ? @Delhipolice @MumbaiPolice pic.twitter.com/dZHKz5BD9A
— Swati Maliwal (@SwatiJaiHind) January 12, 2023
मेरी नोटिस के बाद दिल्ली पुलिस ने @ImVKohli और @MSDhoni की बेटियों पर हुई अभद्र टिपण्णियों के मामले में FIR दर्ज कर ली है। बहुत जल्द सभी दोषी गिरफ़्तार होंगे और सलाख़ों के पीछे जाएँगे। pic.twitter.com/IPFE7Uky0x
— Swati Maliwal (@SwatiJaiHind) January 16, 2023
ಅಲ್ಲದೆ ಈ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನೋಟಿಸ್ ಕಳುಹಿಸುತ್ತಿರುವುದಾಗಿ ಸ್ವಾತಿ ಮಲಿವಾಲ್ ಹೇಳಿಕೊಂಡಿದ್ದರು. ಸ್ವಾತಿ ಮಲಿವಾಲ್ ಅವರ ನೋಟಿಸ್ ಸ್ವೀಕರಿಸಿದ ನಂತರ, ವಿಶೇಷ ಸೆಲ್‌ನ ಐಎಫ್‌ಎಸ್‌ಒ ಘಟಕವು ಪ್ರಕರಣವನ್ನು ದಾಖಲಿಸಿದೆ. ಪ್ರಕರಣ ದಾಖಲಾದ ಬಳಿಕ ಸ್ವಾತಿ ಟ್ವೀಟ್ ಮಾಡಿದ್ದು, ಶೀಘ್ರದಲ್ಲೇ ಆರೋಪಿಗಳು ಕಂಬಿ ಹಿಂದೆ ಬೀಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Mon, 16 January 23