Deodhar Trophy 2023: ಪುದುಚೇರಿಯಲ್ಲಿ ನಡೆಯುತ್ತಿರುವ ದೇವಧರ್ ಟ್ರೋಫಿಯ 2ನೇ ಪಂದ್ಯದಲ್ಲಿ ಕೇಂದ್ರ ವಲಯದ ವಿರುದ್ಧ ಪೂರ್ವ ವಲಯ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ತಂಡದ ನಾಯಕ ಸೌರಭ್ ತಿವಾರಿ ಕೇಂದ್ರ ವಲಯವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲ ಬ್ಯಾಟ್ ಮಾಡಿದ ಕೇಂದ್ರ ವಲಯ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಮಾಧವ್ ಕೌಶಿಕ್ 13 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಯಶ್ ದುಬೆ 17 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.
ಇನ್ನು ತಂಡದ ನಾಯಕ ವೆಂಕಟೇಶ್ ಅಯ್ಯರ್ (8) ರನ್ನು ಬೇಗನೆ ಔಟ್ ಮಾಡುವಲ್ಲಿ ಶಹಬಾಝ್ ಅಹ್ಮದ್ ಯಶಸ್ವಿಯಾದರು. ಕೇವಲ 68 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೇಂದ್ರ ವಲಯಕ್ಕೆ ಈ ಹಂತದಲ್ಲಿ ರಿಂಕು ಸಿಂಗ್ ಆಸರೆಯಾದರು.
ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರಿಂಕು ಸಿಂಗ್ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಅಲ್ಲದೆ ಒಂದೊಂದೇ ರನ್ ಕಲೆಹಾಕುತ್ತಾ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ನಡುವೆ ಅರ್ಧಶತಕ ಪೂರೈಸಿದ ರಿಂಕು ಸಿಂಗ್ 63 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 54 ರನ್ಗಳಿಸಿ ಮುರಾಸಿಂಗ್ಗೆ ವಿಕೆಟ್ ಒಪ್ಪಿಸಿದರು.
ಇತ್ತ ರಿಂಕು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪೂರ್ವ ವಲಯ ಬೌಲರ್ಗಳು ಕೇಂದ್ರ ವಲಯ ತಂಡವನ್ನು 50 ಓವರ್ಗಳಲ್ಲಿ 207 ರನ್ಗಳಿಗೆ ಆಲೌಟ್ ಮಾಡಿದರು. ಪೂರ್ವ ವಲಯ ಪರ ಮುರಾಸಿಂಗ್, ಆಕಾಶ್ ದೀಪ್ ಹಾಗೂ ಶಹಬಾಝ್ ಅಹ್ಮದ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು 208 ರನ್ಗಳ ಸುಲಭ ಗುರಿ ಪಡೆದ ಪೂರ್ವ ವಲಯ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ಉತ್ಕರ್ಷ್ ಸಿಂಗ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 91 ರನ್ ಪೇರಿಸಿ ಅಭಿಮನ್ಯು ಈಶ್ವರನ್ (38) ಔಟಾದರು.
ಮತ್ತೊಂದೆಡೆ ಆಕರ್ಷಕ ಅರ್ಧಶತಕ ಬಾರಿಸಿದ ಉತ್ಕರ್ಷ್ ಸಿಂಗ್ 104 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 89 ರನ್ ಕಲೆಹಾಕಿದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಆದಿತ್ಯಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದದ ಸುಭ್ರಾಂಶು ಸೇನಾಪತಿ ಅಜೇಯ 33 ರನ್ ಬಾರಿಸುವ ಮೂಲಕ 46.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಪೂರ್ವ ವಲಯ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಪೂರ್ವ ವಲಯ ಪ್ಲೇಯಿಂಗ್ 11: ವಿರಾಟ್ ಸಿಂಗ್ , ಸೌರಭ್ ತಿವಾರಿ (ನಾಯಕ) , ಅಭಿಮನ್ಯು ಈಶ್ವರನ್ , ಸುಭ್ರಾಂಶು ಸೇನಾಪತಿ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮಣಿಶಂಕರ್ ಮುರಾಸಿಂಗ್ , ಆಕಾಶ್ ದೀಪ್ , ಅವಿನೋವ್ ಚೌಧರಿ , ಮುಖ್ತಾರ್ ಹುಸೇನ್ , ಉತ್ಕರ್ಷ್ ಸಿಂಗ್.
ಇದನ್ನೂ ಓದಿ: R Ashwin: ಅಶ್ವಿನ್ ಈಗ ಭಾರತದ 2ನೇ ಯಶಸ್ವಿ ಬೌಲರ್..!
ಕೇಂದ್ರ ವಲಯ ಪ್ಲೇಯಿಂಗ್ 11: ವೆಂಕಟೇಶ್ ಅಯ್ಯರ್ (ನಾಯಕ) , ಆರ್ಯನ್ ಜುಯಲ್ (ವಿಕೆಟ್ ಕೀಪರ್) , ಮಾಧವ್ ಕೌಶಿಕ್ , ರಿಂಕು ಸಿಂಗ್ , ಯಶ್ ದುಬೆ , ಶಿವಂ ಮಾವಿ , ಶಿವಂ ಚೌಧರಿ , ಕರ್ಣ್ ಶರ್ಮಾ , ಆದಿತ್ಯ ಸರ್ವತೆ , ಅನಿಕೇತ್ ಚೌಧರಿ , ಯಶ್ ಠಾಕೂರ್.