Riyan Parag: 5 ಭರ್ಜರಿ ಸಿಕ್ಸ್, 6 ಫೋರ್: ತೂಫಾನ್ ಶತಕ ಸಿಡಿಸಿದ ರಿಯಾನ್ ಪರಾಗ್

| Updated By: ಝಾಹಿರ್ ಯೂಸುಫ್

Updated on: Aug 01, 2023 | 4:09 PM

Deodhar Trophy 2023: ಈ ಬಾರಿಯ ದೇವಧರ್ ಟ್ರೋಫಿಯಲ್ಲಿ ರಿಯಾನ್ ಪರಾಗ್ ಬ್ಯಾಟ್​ನಿಂದ ಮೂಡಿಬಂದ 2ನೇ ಶತಕ ಇದು. ಇದಕ್ಕೂ ಮುನ್ನ ಉತ್ತರ ವಲಯ ವಿರುದ್ಧದ ಪಂದ್ಯದಲ್ಲಿ ಯುವ ದಾಂಡಿಗ 131 ರನ್​ ಬಾರಿಸಿ ಅಬ್ಬರಿಸಿದ್ದರು. ಇದೀಗ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದ್ದಾರೆ.

Riyan Parag: 5 ಭರ್ಜರಿ ಸಿಕ್ಸ್, 6 ಫೋರ್: ತೂಫಾನ್ ಶತಕ ಸಿಡಿಸಿದ ರಿಯಾನ್ ಪರಾಗ್
Riyan Parag
Follow us on

Deodhar Trophy 2023: ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ 14ನೇ ಪಂದ್ಯದಲ್ಲಿ ಯುವ ದಾಂಡಿಗ ರಿಯಾನ್ ಪರಾಗ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಪಶ್ಚಿಮ ವಲಯ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಮನ್ಯು ಈಶ್ವರನ್ (38) ಹಾಗೂ ಉತ್ಕರ್ಷ್​ ಸಿಂಗ್ (50) ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಸಿಂಗ್ 42 ರನ್​ಗಳ ಕೊಡುಗೆ ನೀಡಿದರು.
ಇದಾದ ಬಳಿಕ ಕಣಕ್ಕಿಳಿದ ರಿಶವ್ ದಾಸ್ (3) ಹಾಗೂ ನಾಯಕ ಸೌರಭ್ ತಿವಾರಿ (13) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ರಿಯಾನ್ ಪರಾಗ್ ಅಕ್ಷರಶಃ ಅಬ್ಬರಿಸಿದರು.

ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿ ಮೇಲುಗೈ ಪಡೆದಿದ್ದ ಪಶ್ಚಿಮ ವಲಯ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದ ರಿಯಾನ್ ಪರಾಗ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಮೈದಾನದ ಮೂಲೆ ಮೂಲೆಗೆ ಸಿಕ್ಸ್​ ಫೋರ್​ಗಳನ್ನು ಸಿಡಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು.

ಅಂತಿಮವಾಗಿ 68 ಎಸೆತಗಳನ್ನು ಎದುರಿಸಿದ ರಿಯಾನ್ ಪರಾಗ್ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 102 ರನ್ ಬಾರಿಸಿ ಮಿಂಚಿದರು. ಈ ಶತಕದ ನೆರವಿನಿಂದ ಪೂರ್ವ ವಲಯ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 319 ರನ್ ಕಲೆಹಾಕಿತು.

320 ರನ್​ಗಳ ಕಠಿಣ ಗುರಿ ಪಡೆದ ಪಶ್ಚಿಮ ವಲಯ ತಂಡದ ಪರ ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಸಾಥ್ ದೊರಕಿರಲಿಲ್ಲ.

ಪರಿಣಾಮ 100 ರನ್​ಗಳಿಸುವಷ್ಟರಲ್ಲಿ ಪಶ್ಚಿಮ ವಲಯ ತಂಡವು 6 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ್ದ ಹಾರ್ವಿಕ್ ದೇಸಾಯಿ 92 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 34 ಓವರ್​ಗಳಲ್ಲಿ ಪಶ್ವಿಮ ವಲಯ ತಂಡವು 162 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಪೂರ್ವ ವಲಯ ತಂಡವು 157 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಸೆಂಚು’ರಿಯಾನ್’:

ಈ ಬಾರಿಯ ದೇವಧರ್ ಟ್ರೋಫಿಯಲ್ಲಿ ರಿಯಾನ್ ಪರಾಗ್ ಬ್ಯಾಟ್​ನಿಂದ ಮೂಡಿಬಂದ 2ನೇ ಶತಕ ಇದು. ಇದಕ್ಕೂ ಮುನ್ನ ಉತ್ತರ ವಲಯ ವಿರುದ್ಧದ ಪಂದ್ಯದಲ್ಲಿ ಯುವ ದಾಂಡಿಗ 131 ರನ್​ ಬಾರಿಸಿ ಅಬ್ಬರಿಸಿದ್ದರು. ಇದೀಗ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದ್ದಾರೆ.

ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ವಿರಾಟ್ ಸಿಂಗ್ , ಸೌರಭ್ ತಿವಾರಿ (ನಾಯಕ) , ಉತ್ಕರ್ಷ್ ಸಿಂಗ್ , ರಿಯಾನ್ ಪರಾಗ್ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮಣಿಶಂಕರ್ ಮುರಾಸಿಂಗ್ , ರಿಶವ್ ದಾಸ್ , ಮುಖ್ತಾರ್ ಹುಸೇನ್ , ಆಕಾಶ್ ದೀಪ್.

ಪಶ್ಚಿಮ ವಲಯ ಪ್ಲೇಯಿಂಗ್ 11: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಪ್ರಿಯಾಂಕ್ ಪಾಂಚಾಲ್ (ನಾಯಕ) , ರಾಹುಲ್ ತ್ರಿಪಾಠಿ , ಸಮರ್ಥ ವ್ಯಾಸ್ , ಶಿವಂ ದುಬೆ , ಕಥನ್ ಪಟೇಲ್ , ಸರ್ಫರಾಝ್ ಖಾನ್ , ಶಮ್ಸ್ ಮುಲಾನಿ , ಅತಿತ್ ಶೇತ್ , ಅರ್ಝಾನ್ ನಾಗವಾಸ್ವಾಲ್ಲಾ , ರಾಜವರ್ಧನ್ ಹಂಗರ್ಗೇಕರ್.