ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹನ್ ಕುನ್ನುಮ್ಮಲ್ (Rohan Kunnummal) ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪೂರ್ವ ವಲಯ ವಿರುದ್ಧದ ಈ ಪಂದ್ಯದಲ್ಲಿ ದಕ್ಷಿಣ ವಲಯ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹನ್ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ದಕ್ಷಿಣ ವಲಯ ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ವಲಯ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ರೋಹನ್ ಕುನ್ನುಮ್ಮಲ್ ಜೊತೆ ಇನಿಂಗ್ಸ್ ಆರಂಭಿಸಿದ ಮಯಾಂಕ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು.
ಮಯಾಂಕ್ ಜೊತೆಗೂಡಿ ಮೊದಲ ವಿಕೆಟ್ಗೆ 181 ರನ್ ಪೇರಿಸಿದ ರೋಹನ್ ಕುನ್ನುಮ್ಮಲ್ ಪೂರ್ವ ವಲಯ ಬೌಲರ್ಗಳ ಬೆಂಡೆತ್ತಿದ್ದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ಕೇರಳದ ಈ ಯುವ ಬ್ಯಾಟರ್ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು.
ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಲು ಹೋದ ರೋಹನ್ 75 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 107 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಮಯಾಂಕ್ ಅಗರ್ವಾಲ್ 83 ಎಸೆತಗಳಲ್ಲಿ 63 ರನ್ಗಳ ಕೊಡುಗೆ ನೀಡಿದರು.
ರೋಹನ್ ಕುನ್ನುಮ್ಮಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ಬ್ಯಾಟಿಂಗ್ನಿಂದ ದಕ್ಷಿಣ ವಲಯ ತಂಡವು ಈ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಪಡೆಯಿತು. ಇವರ ಬಳಿಕ ಕಣಕ್ಕಿಳಿದ ಎನ್ ಜಗದೀಸನ್ (60) ಕೂಡ ಅರ್ಧಶತಕ ಸಿಡಿಸಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ದಕ್ಷಿಣ ವಲಯ ತಂಡವು 8 ವಿಕೆಟ್ ನಷ್ಟಕ್ಕೆ 328 ರನ್ ಪೇರಿಸಿದೆ. ಈ ಮೂಲಕ ಪೂರ್ವ ವಲಯ ತಂಡಕ್ಕೆ 329 ರನ್ಗಳ ಟಾರ್ಗೆಟ್ ನೀಡಿದೆ.
25 ವರ್ಷದ ರೋಹನ್ ಕುನ್ನುಮ್ಮಲ್ ದೇಶೀಯ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸುತ್ತಿದ್ದಾರೆ. ಈ ಬಾರಿಯ ದೇವಧರ್ ಟೂರ್ನಿಯಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 62.20 ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಹಾಗೆಯೇ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇದುವರೆಗೆ 3 ಶತಕ ಹಾಗೂ 5 ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ.