IND vs NZ: 5 ಪಂದ್ಯಗಳಲ್ಲಿ 4 ಶತಕ ಸಿಡಿಸಿರುವ ಕನ್ನಡಿಗನಿಗೆ ಮತ್ತೆ ಅನ್ಯಾಯ

Devdutt Padikkal's ODI Snub: ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ದೇವದತ್ ಪಡಿಕ್ಕಲ್, ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಲ್ಕು ಶತಕ ಸಿಡಿಸಿ ಮಿಂಚಿದ್ದಾರೆ. ಕೆಎಲ್ ರಾಹುಲ್ ಅವರಂತೆಯೇ ಏಕದಿನ ಮಾದರಿಗೆ ಸೂಕ್ತರಾಗಿದ್ದರೂ, ಅವರಿಗೆ ಭಾರತ ತಂಡದಲ್ಲಿ ಇದುವರೆಗೂ ಅವಕಾಶ ಸಿಕ್ಕಿಲ್ಲ. ಬಿಸಿಸಿಐ 2027ರ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸುತ್ತಿರುವುದರಿಂದ ಪಡಿಕ್ಕಲ್‌ಗೆ ಸದ್ಯಕ್ಕೆ ಸ್ಥಾನ ಸಿಗುವುದು ಅನುಮಾನ. ಭವಿಷ್ಯದಲ್ಲಿ ಖಂಡಿತ ಅವಕಾಶ ಸಿಗುವ ಸಾಧ್ಯತೆ ಇದೆ.

IND vs NZ: 5 ಪಂದ್ಯಗಳಲ್ಲಿ 4 ಶತಕ ಸಿಡಿಸಿರುವ ಕನ್ನಡಿಗನಿಗೆ ಮತ್ತೆ ಅನ್ಯಾಯ
Devdutt Padikkal

Updated on: Jan 03, 2026 | 10:32 PM

ಕೆಎಲ್ ರಾಹುಲ್ (KL Rahul) ಬಳಿಕ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಎಂದರೇ ಅದು ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ (Devdutt Padikkal). ಪಡಿಕ್ಕಲ್ ಇದುವರೆಗೆ ಟೀಂ ಇಂಡಿಯಾ ಪರ 2 ಟೆಸ್ಟ್ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಇತರೆ ಆಟಗಾರರಿಗೆ ಹೋಲಿಸಿಕೊಂಡರೆ ಪಡಿಕ್ಕಲ್​ಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ರಾಹುಲ್​ರಂತೆ ಏಕದಿನ ಮಾದರಿಗೆ ಹೇಳಿ ಮಾಡಿಸಿದ ಕೌಶಲ್ಯ ಹೊಂದಿರುವ ಪಡಿಕ್ಕಲ್​ಗೆ ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ಇದುವರೆಗೂ ಸಿಕ್ಕಿಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಡಿಕ್ಕಲ್ ಆಯ್ಕೆಯ ಬಗ್ಗೆ ಮಾಜಿ ಕ್ರಿಕೆಟಿಗರು ಕೂಡ ಭವಿಷ್ಯ ನುಡಿದಿದ್ದರು. ಆದರೆ ಕಿವೀಸ್ ವಿರುದ್ಧದ ಸರಣಿಗೂ ಅವರನ್ನು ಕಡೆಗಣಿಸಲಾಗಿದೆ.

ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ

ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಇದುವರೆಗೆ 38 ಪಂದ್ಯಗಳನ್ನಾಡಿರುವ ಪಡಿಕ್ಕಲ್ ಬರೋಬ್ಬರಿ 13 ಶತಕ ಹಾಗೂ 12 ಅರ್ಧಶತಕಗಳ ಸಹಿತ 2500 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರ ಜೊತೆಗೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್​ಗಳ ಶಿಖರ ಕಟ್ಟಿರುವ ಪಡಿಕ್ಕಲ್ ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

5 ಪಂದ್ಯಗಳಲ್ಲಿ 4 ಶತಕ

ಮಾತ್ರವಲ್ಲದೆ ಈ ಟೂರ್ನಿಯಲ್ಲಿ ಇದುವರೆಗೆ ನಡೆದಿರುವ ಐದು ಪಂದ್ಯಗಳಲ್ಲಿ ಪಡಿಕ್ಕಲ್ 4 ಶತಕಗಳನ್ನು ಬಾರಿಸಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಜಾರ್ಖಂಡ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ 147 ರನ್​ಗಳ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಆ ಬಳಿಕ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ 124 ರನ್ ಹಾಗೂ ಪಾಂಡಿಚೇರಿ ವಿರುದ್ಧದ ಪಂದ್ಯದಲ್ಲಿ 113 ರನ್ ಮತ್ತು ಈಗ ತ್ರಿಪುರ ವಿರುದ್ಧದ ಪಂದ್ಯದಲ್ಲಿ 108 ರನ್​ ಬಾರಿಸುವ ಮೂಲಕ ಪಡಿಕ್ಕಲ್ ತಂಡವನ್ನು ಅಜೇಯ ಓಟದತ್ತ ಮುನ್ನಡೆಸಿದ್ದಾರೆ. ಹೀಗಾಗಿ ಕಿವೀಸ್ ವಿರುದ್ಧದ ಸರಣಿಗೆ ಪಡಿಕ್ಕಲ್ ಅವರನ್ನು ಆಯ್ಕೆಗೆ ಪರಿಗಣಿಸಬೇಕೆಂಬ ಕೂಗು ಜೋರಾಗಿತ್ತು. ಆದರೆ ಬಿಸಿಸಿಐ ಮಾತ್ರ ಕನ್ನಡಿಗನ ಪ್ರದರ್ಶನಕ್ಕೆ ಯಾವುದೇ ಮನ್ನಣೆ ನೀಡಿಲ್ಲ.

ದೇಶಿ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅಬ್ಬರ; ಭಾರತ ತಂಡಕ್ಕೆ ಆಯ್ಕೆ ಯಾವಾಗ?

ದೇವದತ್ ಆಯ್ಕೆ ಸಾಧ್ಯವಿಲ್ಲ ಏಕೆ?

ಭವಿಷ್ಯದಲ್ಲಿ ದೇವದತ್ ಪಡಿಕ್ಕಲ್ ಭಾರತ ಏಕದಿನ ತಂಡದಲ್ಲಿ ಖಾಯಂ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಧ್ಯಕ್ಕೆ ಪಡಿಕ್ಕಲ್ ಏಕದಿನ ತಂಡದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ. ಏಕೆಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಈ ವಿಶ್ವಕಪ್​ಗೆ ವರ್ಷಗಳ ಹಿಂದೆಯೇ ಬಿಸಿಸಿಐ ತನ್ನ ತಯಾರಿಯನ್ನು ಆರಂಭಿಸಿದ್ದು, ಯಾವ ಆಟಗಾರನನ್ನು ಯಾವ ಸ್ಥಾನದಲ್ಲಿ ಆಡಿಸಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದೆ. ಅಲ್ಲದೆ 2027 ರ ವಿಶ್ವಕಪ್‌ಗೆ ಯಾವ ತಂಡವನ್ನು ಕಣಕ್ಕಿಳಿಸಬೇಕು ಎಂಬುದನ್ನು ಬಿಸಿಸಿಐ ಸಿದ್ಧಪಡಿಸಿ ಆಗಿದೆ. ಹೀಗಾಗಿ ದೇಶಿ ಟೂರ್ನಿಯಲ್ಲಿ ಮಿಂಚುತ್ತಿರುವ ಪಡಿಕ್ಕಲ್​ಗೆ ಇನ್ನೊಂದು ವರ್ಷ ಏಕದಿನ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ. ಆದರೆ ಏಕದಿನ ವಿಶ್ವಕಪ್ ಮುಗಿದ ಬಳಿಕ ಕೊಹ್ಲಿ, ರೋಹಿತ್ ಸೇರಿದಂತೆ ಕೆಲವು ಆಟಗಾರರು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದು, ಆ ಬಳಿಕವಷ್ಟೇ ಪಡಿಕ್ಕಲ್​ರಂತೆಯೇ ಇನ್ನು ಕೆಲವು ಆಟಗಾರರು ಏಕದಿನ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ