ಕಳೆದ ಶುಕ್ರವಾರ ಅಂದರೆ ಡಿಸೆಂಬರ್ 30 ರಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ (Rishabh Pant ) ಅವರ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ. ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಪಂತ್ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್ಗೂ ಸ್ಥಳಾಂತರಿಸಲಾಗಿದೆ. ವಾಸ್ತವವಾಗಿ ದೆಹಲಿಯಿಂದ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಪಂತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಆದರೀಗ ಸೋಶಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋವೊಂದು ಹರಿದಾಡುತ್ತಿದೆ. ಅಲ್ಲದೆ ಗಾಯಾಳು ಪಂತ್‌ಗೆ ರೋಹಿತ್ ರಕ್ತ ನೀಡಿದ್ದಾರೆ ಎಂಬ ಶೀರ್ಷಿಕೆಯನ್ನು ಸಹ ನೀಡಲಾಗಿದೆ. ಹೀಗಾಗಿ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಈ ವದಂತಿಗೆ ತೆರೆ ಎಳೆದಿರುವ ಇಂಡಿಯಾ ಟುಡೇ ಇದೆಲ್ಲ ಸುಳ್ಳು ಎಂಬ ವರದಿ ನೀಡಿದೆ.
ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋಗೆ ಚಿತ್ರ ವಿಚಿತ್ರವಾದ ಕಥೆ ಕಟ್ಟಲಾಗುತ್ತಿದೆ. ‘ನಾಯಕ ರೋಹಿತ್ ಶರ್ಮಾ ಗಾಯಗೊಂಡ ಪಂತ್ ಅವರನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಾರೆ. ಅದೇ ವೇಳೆಗೆ ಆಸ್ಪತ್ರೆ ವೈದ್ಯರು ಪಂತ್‌ಗೆ ತುರ್ತಾಗಿ ರಕ್ತ ಬೇಕಾಗಿದೆ ಎಂದಿದ್ದಾರೆ. ಕೂಡಲೇ ನಾಯಕ ರೋಹಿತ್ ಶರ್ಮಾ, ಪಂತ್‌ಗೆ ರಕ್ತ ನೀಡಿ ಅವರ ಜೀವ ಉಳಿಸಿದ್ದಾರೆ’ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತಿದೆ.
ಆದರೆ ಈ ಬಗ್ಗೆ ತನಿಖೆ ನಡೆಸಿರುವ ಇಂಡಿಯಾ ಟುಡೇ, ರೋಹಿತ್ ಶರ್ಮಾ ಪಂತ್‌ಗೆ ರಕ್ತದಾನ ಮಾಡಿದ್ದಾರೆ ಎಂಬ ಸುದ್ದಿ ನಿಜವಲ್ಲ ಎಂಬುದನ್ನು ಬಹಿರಂಗಗೊಳಿಸಿದೆ. ಅಲ್ಲದೆ ವೈರಲ್ ಆಗುತ್ತಿರುವ ರೋಹಿತ್ ಅವರ ಫೋಟೋ ಕೂಡ ಇತ್ತೀಚಿನದಲ್ಲ. ಅದು ಆರು ವರ್ಷಕ್ಕಿಂತ ಹಳೆಯದು ಎಂಬ ಮಾಹಿತಿಯನ್ನು ಹೊರಹಾಕಿದೆ.
ಏನು….? ಪಂತ್ ಅಪಘಾತದ ಸುದ್ದಿ ಕೇಳಿದಾಗ ಕಿಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಇಡೀ ವದಂತಿಯ ಬಗ್ಗೆ ತನಿಖೆ ನಡೆಸಿರುವ ಇಂಡಿಯಾ ಟುಡೇ ತನ್ನ ತನಿಖೆಯಲ್ಲಿ ಹೇಳಿರುವುದೇನೆಂದರೆ, ‘ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಶರ್ಮಾ ಅವರ ವೈರಲ್ ಫೋಟೋವನ್ನು ನಾವು ರಿವರ್ಸ್-ಸರ್ಚ್ ಮಾಡಿದಾಗ, ಅದು ನವೆಂಬರ್ 11, 2016 ರಂದು ರೋಹಿತ್ ಅವರೇ ಮಾಡಿದ ಟ್ವೀಟ್ ಎಂಬುದು ಸಾಭೀತಾಗಿದೆ. ವಾಸ್ತವವಾಗಿ 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯ ನಡೆಯುವ ಸಂದರ್ಭದಲ್ಲಿ ತೊಡೆಯ ಗಾಯಕ್ಕೆ ಒಳಗಾಗಿದ್ದ ರೋಹಿತ್, ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಫೋಟೋವನ್ನು ತೆಗೆಯಲಾಗಿದೆ ಎಂದು ತಿಳಿಸಿದೆ.
All went well. Thank you for your good wishes. Can’t wait to be back at it ?? pic.twitter.com/llKqRtc3LJ
— Rohit Sharma (@ImRo45) November 11, 2016
ಅಲ್ಲದೆ ನಾವು ವೈರಲ್ ಟ್ವೀಟ್‌ನಿಂದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಿದಾಗ ಪಂತ್‌ಗೆ ರಕ್ತದಾನ ಮಾಡಲು ಶರ್ಮಾ ಆಸ್ಪತ್ರೆಗೆ ಧಾವಿಸಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ರೋಹಿತ್ ಶರ್ಮಾ, ಪಂತ್‌ಗೆ ಅಪಘಾತವಾದ ದಿನ ಅಂದರೆ ಹೊಸ ವರ್ಷದ ಮುನ್ನಾದಿನದಂದು ಮಾಲ್ಡೀವ್ಸ್‌ನಲ್ಲಿ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಮತ್ತು ಮಗಳು ಸಮೈರಾ ಅವರೊಂದಿಗಿದ್ದರು ಎಂಬುದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದೆ.
ಅಲ್ಲದೆ ಈ ಸುದ್ದಿಯನ್ನು ಖಚಿತ ಪಡಿಸಿಕೊಳ್ಳಲು ಸ್ವತಃ ರೋಹಿತ್ ಅವರೊಂದಿಗೆ ಮಾತನಾಡಿರುವ AFWA (Anti Fake News War Room
) ಸ್ಪೋರ್ಟ್ಸ್ ಟಾಕ್‌ನ ಹಿರಿಯ ಕ್ರೀಡಾ ಪತ್ರಕರ್ತ ವಿಕ್ರಾಂತ್ ಗುಪ್ತಾ, ಇದುವರೆಗೆ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಆದಾಗ್ಯೂ, ಮಾಲ್ಡೀವ್ಸ್‌ನಲ್ಲಿರುವ ರೋಹಿತ್ ಶರ್ಮಾ, ರಿಷಬ್ ಪಂತ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ, ಪಂತ್‌ಗೆ ರೋಹಿತ್ ಶರ್ಮಾ ರಕ್ತದಾನ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Wed, 4 January 23