ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ (Sri Lanka vs Australia) ತಂಡ ಇನ್ನಿಂಗ್ಸ್ ಮತ್ತು 39 ರನ್‌ಗಳ ಗೆಲುವು ಕಂಡಿದೆ. ದಿನೇಶ್ ಚಂಡಿಮಲ್ ಅವರ ಅಜೇಯ ದ್ವಿಶತಕ ಮತ್ತು ಎಡಗೈ ಸ್ಪಿನ್ನರ್ ಪ್ರಭತ್ ಜಯಸೂರ್ಯ (Prabath Jayasuriya) ಅವರ ಮಾರಕ ಬೌಲಿಂಗ್ನಿಂದ ಶ್ರೀಲಂಕಾ ತಂಡ ಜಯ ಸಾಧಿಸಿದ್ದು ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿ 1-1 ರಲ್ಲಿ ಸಮಬಲ ಗೊಂಡಿದೆ. ಮೊದಲ ಟೆಸ್ಟ್ ಅನ್ನು ಆಸ್ಟ್ರೇಲಿಯಾ ಮೂರೇ ದಿನಗಳಲ್ಲಿ ಗೆದ್ದುಕೊಂಡಿದ್ದರೆ, ಲಂಕಾ ಈ ಪಂದ್ಯವನ್ನು ನಾಲ್ಕು ದಿನಗಳಲ್ಲೇ ಗೆದ್ದು ತಿರುಗೇಟು ನೀಡಿತು. ಗಾಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಶ್ರೀಲಂಕಾ ಪರ ಅಜೇಯ ಶತಕ ಸಿಡಿಸಿ ನಾಲ್ಕನೇ ದಿನದಾಟ ಕಾಯ್ದುಕೊಂಡಿದ್ದ ದಿನೇಶ್ ಚಂಡಿಮಲ್ (Dinesh Chandimal) ಅದ್ಭುತ ಇನ್ನಿಂಗ್ಸ್ ಪ್ರದರ್ಶಿಸುವ ಮೂಲಕ ಲಂಕಾ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದರು. 326 ಎಸೆತಗಳನ್ನ ಎದುರಿಸಿ ಅಜೇಯ 206 ರನ್ ಕಲೆಹಾಕಿದ ಇವರು ಇಡೀ ತಂಡದ ಬ್ಯಾಟರ್‌ಗಳು ಔಟಾದರೂ ಕೊನೆಯವರೆಗೆ ಕ್ರೀಸ್‌ನಲ್ಲಿ ಉಳಿದು ತಂಡದ ಸ್ಕೋರ್ 500ರ ಗಡಿದಾಟುವಂತೆ ಮಾಡಿದರು.
ಅದರಲ್ಲೂ ಚಂಡಿಮಲ್ ಸಿಡಿಸಿದ ಸಿಕ್ಸ್ ಒಂದು ಅಮೋಘವಾಗಿತ್ತು. ಅದು ವಿಶ್ವ ಶ್ರೇಷ್ಠ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ಗೆ. ಹೌದು, ಚಂಡಿಮಲ್ ಬಾರಿಸಿದ ಸಿಕ್ಸ್ ಸ್ಟೇಡಿಯಂ ಹೊರಗಡೆಯೇ ಹೋಯಿತು. ಅಷ್ಟೇ ಅಲ್ಲದೆ ಚೆಂಡು ದಾರಿಯಲ್ಲಿ ಸಾಗುತ್ತಿದ್ದ ಪಾದಚಾರಿಯ ಕಾಲಿಗೆ ತಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ. ಚಂಡಿಮಲ್ ದ್ವಿತಶಕ ಆಟದಿಂದಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 554 ರನ್‌ಗಳನ್ನ ಕಲೆಹಾಕಿದ್ದಲ್ಲದೆ, 190 ರನ್‌ಗಳ ಅಮೋಘ ಮುನ್ನಡೆ ಸಾಧಿಸಿತು.
#SLvAUS #dineshchandimal pic.twitter.com/84Duro4bkg
— Jemi_forlife (@jemi_forlife) July 11, 2022
ಮೊದಲ ಇನ್ನಿಂಗ್ಸ್‌ನಲ್ಲಿ 554 ರನ್‌ಗಳ ಬೃಹತ್ ರನ್ ಕಲೆಹಾಕಿದ್ದ ಲಂಕಾಗೆ ಉತ್ತರವಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಕೇವಲ 154ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿತು. ಶ್ರೀಲಂಕಾದ ಸ್ಪಿನ್ನರ್ ಪ್ರಬತ್ ಜಯಸೂರ್ಯ ದಾಳಿಗೆ ನಲುಗಿದ ಆಸಿಸ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಚೊಚ್ಚಲ ಪಂದ್ಯದಲ್ಲಿ 12 ವಿಕೆಟ್ ಕಬಳಿಸಿದ ಜಯಸೂರ್ಯ ತಂಡದ ಹೀರೋ ಆಗಿ ಮಿಂಚಿದರು.
ಆಸಿಸ್ ಪರ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಡೇವಿಡ್ ವಾರ್ನರ್ 24, ಉಸ್ಮಾನ್ ಖವಾಜ 29, ಮಾರ್ನಸ್ ಲ್ಯಾಬುಸ್ಚಾಗ್ನೆ 32, ಸ್ಟೀವನ್ ಸ್ಮಿತ್ 0, ಟ್ರಾವಿಸ್ ಹೆಡ್ 5, ಕ್ಯಾಮರೂನ್ ಗ್ರೀನ್ 23, ಅಲೆಕ್ಸ್ ಕ್ಯಾರಿ 16 ಬಂದ ಬೆನ್ನಲ್ಲೇ ಪೆವಿಲಿಯನ್ ಸೇರಿಕೊಂಡರು.
ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಶ್ರೀಲಂಕಾ ತಂಡ ಈ ಗೆಲುವಿನೊಂದಿಗೆ ಭಾರೀ ಏರಿಕೆ ಕಂಡಿದ್ದು ಭಾರತ ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಇದೀಗ ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಕೂಡ ಹೊಂದಿದೆ.