CWG 2022: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ; ಹರ್ಮನ್ಪ್ರೀತ್ ಕೌರ್ಗೆ ನಾಯಕತ್ವ
CWG 2022: ಬಿಸಿಸಿಐ ಕೂಡ ಕಾಮನ್‌ವೆಲ್ತ್ ಗೇಮ್ಸ್ಗೆ ತನ್ನ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ 15 ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದ್ದು, ತಂಡದ ನಾಯಕತ್ವವನ್ನು ಹರ್ಮನ್ಪ್ರೀತ್ ಕೌರ್ಗೆ ವಹಿಸಲಾಗಿದೆ.
ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ (Commonwealth Games) ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಸೋಮವಾರ, ಜುಲೈ 11 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕ್ರೀಡಾಕೂಟಕ್ಕೆ 15 ಸದಸ್ಯರ ತಂಡವನ್ನು ಘೋಷಿಸಿತು. ತಂಡದ ನಾಯಕತ್ವವನ್ನು ಸ್ಟಾರ್ ಆಲ್‌ರೌಂಡರ್ ಹರ್ಮನ್‌ಪ್ರೀತ್ ಕೌರ್ ವಹಿಸಲಿದ್ದಾರೆ. ಜುಲೈ 27 ರಿಂದ ಪ್ರಾರಂಭವಾಗುವ ಆಟಗಳಲ್ಲಿ 24 ವರ್ಷಗಳ ನಂತರ ಕ್ರಿಕೆಟ್ ಮರಳುತ್ತಿದ್ದು, ಮಹಿಳಾ ಕ್ರಿಕೆಟ್ ಅನ್ನು ಇದರಲ್ಲಿ ಮೊದಲ ಬಾರಿಗೆ ಸೇರಿಸಲಾಗಿದೆ. ಭಾರತವಲ್ಲದೆ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಆತಿಥೇಯ ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಸೇರಿದಂತೆ ಕೆಲವು ದೊಡ್ಡ ತಂಡಗಳು ಟಿ20 ಮಾದರಿಯಲ್ಲಿ ಪಂದ್ಯಗಳಲ್ಲಿ ಭಾಗವಹಿಸುತ್ತಿವೆ.
ಭಾರತ ಮಹಿಳಾ ತಂಡ
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ಎಸ್ ಮೇಘನಾ, ತಾನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್‌ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಸ್ನೇಹ ರಾಣಾ.
ಸ್ಟ್ಯಾಂಡ್‌ಬೈ – ಸಿಮ್ರಾನ್ ದಿಲ್ ಬಹದ್ದೂರ್, ರಿಚಾ ಘೋಷ್, ಪೂನಂ ಯಾದವ್
? NEWS ?: #TeamIndia (Senior Women) squad for Birmingham 2022 Commonwealth Games announced. #B2022 | @birminghamcg22 pic.twitter.com/lprQenpFJv
— BCCI Women (@BCCIWomen) July 11, 2022
ಕ್ರಿಕೆಟ್ ತಂಡದ ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಬಾರಿ ಭಾರತದ 215 ಆಟಗಾರರ ತಂಡ ಭಾಗವಹಿಸುತ್ತಿದೆ. ಈ 215 ಆಟಗಾರರಲ್ಲಿ 108 ಪುರುಷರು ಮತ್ತು 107 ಮಹಿಳೆಯರು ಸೇರಿದ್ದಾರೆ. ಜ್ಯುವೆಲಿನ್ ಥ್ರೋವರ್ ನೀರಜ್ ಚೋಪ್ರಾ, ಕುಸ್ತಿಪಟು ಬಜರಂಗ್ ಪೂನಿಯಾ, ಬಾಕ್ಸರ್ ನಿಖತ್ ಜರೀನ್ ಅವರಂತಹ ಸ್ಟಾರ್ ಆಟಗಾರರನ್ನು ಈ ಬಾರಿ ನೋಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತದೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕಗಳನ್ನು ಗೆದ್ದುಕೊಂಡಿತ್ತು, ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೇ ಗುರಿಯೊಂದಿಗೆ ಭಾರತ ಕಾಮನ್‌ವೆಲ್ತ್ ಪ್ರವೇಶಿಸಲಿದೆ. ಭಾರತ ಹಲವು ಕ್ರೀಡೆಗಳಲ್ಲಿ ತಮ್ಮ ಆಟಗಾರರನ್ನು ಕಣಕ್ಕಿಳಿಸಲಿದೆ.
Published On - 10:35 pm, Mon, 11 July 22