
ಐಸಿಸಿ ಟಿ20 ವಿಶ್ವಕಪ್ನಲ್ಲಿ (T20 World Cup) ಈಗ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಈ ಮಹಾ ಟೂರ್ನಿಗೆ ಅಧಿಕೃತವಾಗಿ ಅ. 22 ಕ್ಕೆ ಚಾಲನೆ ಸಿಗಲಿದ್ದು ಶನಿವಾರ ನಡೆಯಲಿರುವ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡ ಮುಖಾಮುಖಿ ಆಗಲಿದೆ. ಅಕ್ಟೋಬರ್ 23 ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕಾಗಿ ರೋಹಿತ್ ಪಡೆ ಈಗಾಗಲೇ ಎಮ್ಸಿಜಿಗೆ ಕಾಲಿಟ್ಟಿದ್ದು ಇಂದಿನಿಂದ ಅಭ್ಯಾಸ ಕೂಡ ಶುರು ಮಾಡಲಿದೆ. ಹೀಗಿರುವಾಗ ಟೀಮ್ ಇಂಡಿಯಾ (Team India) ಮೂಲಗಳಿಂದ ಮುಖ್ಯ ಸುದ್ದಿಯೊಂದು ಹೊರಬಿದ್ದಿದೆ. ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಈ ಪ್ಲೇಯರ್ ಕಣಕ್ಕಿಳಿಯುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಪಂತ್ ಔಟ್-ಕಾರ್ತಿಕ್ ಇನ್:
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸುವ ಯೋಜನೆ ಮಾಡಿರುವ ಕೋಚ್ ಹಾಗು ನಾಯಕ ಹಿರಿಯ, ಕಿರಿಯ ಎಂದು ನೋಡದೆ ಫಾರ್ಮ್ನಲ್ಲಿರುವ ಪ್ಲೇಯರ್ಸ್ಗೆ ಮಣೆ ಹಾಕಲು ಮುಂದಾಗಿದ್ದಾರೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಪಾಕ್ ವಿರುದ್ಧದ ಪಂದ್ಯದಿಂದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ಹೊರಗಿಡುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ ಎನ್ನಲಾಗಿದೆ. ಪಂತ್ ಬದಲು ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಂತೆ.
ಟಿ20 ವಿಶ್ವಕಪ್ಗಾಗಿ ಕಾಂಗರೂಗಳ ನಾಡಿಗೆ ಬಂದ ಬಳಿಕ ಭಾರತ ನಾಲ್ಕು ಅಭ್ಯಾಸ ಪಂದ್ಯಗಳ ಪೈಕಿ ಒಟ್ಟು ಮೂರು ಪಂದ್ಯವನ್ನು ಆಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಎರಡೂ ವಾರ್ಮ್-ಅಪ್ ಮ್ಯಾಚ್ನಲ್ಲಿ ಪಂತ್ 9 ರನ್ ಗಳಿಸಿ ಔಟಾಗಿದ್ದರು. ಫಾರ್ಮ್ನಲ್ಲಿ ಇಲ್ಲದ ಪಂತ್ ಅವರನ್ನು ನಂತರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬೆಂಚ್ ಕಾಯಿಸಲಾಯಿತು. ಇತ್ತ ದಿನೇಶ್ ಕಾರ್ತಿಕ್ ಅಜೇಯ 19, 10 ಹಾಗೂ 20 ರನ್ ಗಳಿಸಿದ್ದಾರೆ. ಹೀಗಾಗಿ ಫಿನಿಶರ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾರ್ತಿಕ್ ಆರಂಭದ ಕೆಲವು ಪಂದ್ಯಗಳಲ್ಲಿ ಪಂತ್ ಬದಲು ಆಡಬಹುದು.
ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI:
ಇನ್ನು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ ಬಳಗ ಹೀಗಿದ್ದರೆ ಬಲಿಷ್ಠವಾಗಿರುತ್ತದೆ ಎಂದು ಹೇಳಿದ್ದಾರೆ. ಅಚ್ಚರಿ ಎಂದರೆ ಭಜ್ಜಿ ಪ್ರಕಟಿಸಿರುವ ತಂಡದಲ್ಲಿ ಕೂಡ ರಿಷಭ್ ಪಂತ್, ಹರ್ಷಲ್ ಪಟೇಲ್ ಹಾಗೂ ಆರ್. ಅಶ್ವಿನ್ಗೆ ಸ್ಥಾನವಿಲ್ಲ. ”ನನಗನಿಸುವ ಪ್ರಕಾರ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಇರಲಿದ್ದಾರೆ. ಜೊತೆಗೆ ಯುಜ್ವೇಂದ್ರ ಚಹಲ್, ಅರ್ಶ್ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ”, ಎಂದು ಹೇಳಿದ್ದಾರೆ.
”ಇವಿಷ್ಟು ನನ್ನ ಆಯ್ಕೆ. ಹರ್ಷಲ್ ಪಟೇಲ್ಗೆ ಸ್ಥಾನ ಸಿಗುವುದು ಅನುಮಾನ. ದೀಪಕ್ ಹೂಡ ಹಾಗೂ ಆರ್. ಅಶ್ವಿನ್ ಅವರನ್ನು ಟೂರ್ನಿಯ ಮಧ್ಯದಲ್ಲಿ ಆಡಿಸಬಹುದು. ಆರಂಭದ ಕೆಲ ಪಂದ್ಯಗಳಿಗೆ ಭಾರತದ ಪ್ಲೇಯಿಂಗ್ ಇಲೆವೆನ್ ಈರೀತಿ ಇರಬಹುದು ಎಂಬುದು ನನ್ನ ಕಲ್ಪನೆ. ರಿಷಭ್ ಪಂತ್ ಬದಲು ದಿನೇಶ್ ಕಾರ್ತಿಕ್ ಹಾಗೂ ಆರ್. ಅಶ್ವಿನ್ ಬದಲು ಅಕ್ಷರ್ ಪಟೇಲ್ ಅವರನ್ನು ಮೊದಲ ಕೆಲವು ಪಂದ್ಯಗಳಲ್ಲಿ ಆಡಿಸಬಹುದು”, ಎಂದು ಹರ್ಭಜನ್ ಹೇಳಿದ್ದಾರೆ.
Published On - 9:20 am, Fri, 21 October 22