ಐಪಿಎಲ್ನಿಂದಾಗಿ ಭಾರತದಲ್ಲಿ ಅನೇಕ ಯುವ ಪ್ರತಿಭೆಗಳು ಹುಟ್ಟಿಕೊಂಡಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಬ್ಬರಿಸುವುದರೊಂದಿಗೆ ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂತಹ ನೂರಾರು ಪ್ರತಿಭೆಗಳಿದ್ದು, ಅಂತಹವರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಒಬ್ಬರು. ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಕಿಶನ್ಗೆ ಸಾಕಷ್ಟು ಪ್ರತಿಭೆಯಿದ್ದರೂ ತಂಡದಲ್ಲಿ ಮಾತ್ರ ಅವಕಾಶ ಸಿಗುತ್ತಿಲ್ಲ. ಆದರೂ ಸಹ ತನ್ನ ಪ್ರಯತ್ನ ಬಿಡದ ಕಿಶನ್ ದೇಶೀ ಟೂರ್ನಿಯಲ್ಲಿ ತನ್ನ ಅಬ್ಬರ ಮುಂದುವರೆಸಿದ್ದಾರೆ.
ಭಾರತದಲ್ಲಿ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ನಡೆಯುತ್ತಿದ್ದು, ಇದರಲ್ಲಿ ದೇಶೀಯ ಕ್ರಿಕೆಟಿಗರನ್ನು ಹೊರತುಪಡಿಸಿ, ಟೀಂ ಇಂಡಿಯಾದ ಅನೇಕ ಆಟಗಾರರು ಸಹ ಆಡುತ್ತಿದ್ದಾರೆ. ಇವರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಇಶಾನ್ ಕಿಶನ್ ಕೂಡ ಜಾರ್ಖಂಡ್ ಪರ ಆಡುತ್ತಿದ್ದಾರೆ.
ಅಕ್ಟೋಬರ್ 20, ಗುರುವಾರದಂದು ಒಡಿಶಾ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ ಕಿಶನ್ ಅಮೋಘ ಶತಕ ಬಾರಿಸಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 64 ಎಸೆತಗಳನ್ನು ಎದುರಿಸಿದ ಕಿಶನ್ 7 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 102 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಆಧಾರದ ಮೇಲೆ ಜಾರ್ಖಂಡ್ 188 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಒಡಿಶಾದ ಇಡೀ ತಂಡವು ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಜಾರ್ಖಂಡ್ ತಂಡ ಪಂದ್ಯವನ್ನು 71 ರನ್‌ಗಳಿಂದ ಗೆದ್ದುಕೊಂಡಿತು.
ಕಿಶನ್, ದೇಶೀ ಟೂರ್ನಿಯಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ 93 ರನ್‌ಗಳಿಗೆ ತಮ್ಮ ವಿಕೆಟ್ ಒಪ್ಪಿಸಿ ಶತಕದಿಂದ ವಂಚಿತರಾಗಿದ್ದರು.
Published On - 10:29 am, Fri, 21 October 22