IPL 2022: ಐಪಿಎಲ್ ಸೀಸನ್ 15 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (Dinesh Karthik) ಅಬ್ಬರ ಮುಂದುವರೆದಿದೆ. ಸ್ಲಾಗ್ ಓವರ್ ಗಳಲ್ಲಿ ಎದುರಾಳಿ ತಂಡದ ಬೌಲರ್ಗಳ ಅಬ್ಬರಿಸುತ್ತಿರುವ ಕಾರ್ತಿಕ್ ಎಸ್ಆರ್ಹೆಚ್ ವಿರುದ್ದದ ಪಂದ್ಯದಲ್ಲೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೊನೆಯ ಓವರ್ನಲ್ಲಿ 22 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 192 ರನ್ಗೆ ತಂದು ನಿಲ್ಲಿಸಿದರು. ವಿಶೇಷ ಎಂದರೆ ಡಿಕೆ ಕೊನೆಯ ಓವರ್ನಲ್ಲಿ ಆರ್ಭಟಿಸುವ ಮೂಲಕ ಇದೀಗ ಐಪಿಎಲ್ನ ಹೊಸ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ.
ಐಪಿಎಲ್ 2022 ರ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದೂವರೆ ಕೋಟಿಗೆ ಖರೀದಿಸಿತು. 15ನೇ ಸೀಸನ್ನಲ್ಲಿ ತಂಡ ಅವರಿಂದ ಏನು ನಿರೀಕ್ಷಿಸಿತ್ತೊ ಇದೀಗ ಅದು ಲಭ್ಯವಾಗುತ್ತಿದೆ. ಏಕೆಂದರೆ ಕಾರ್ತಿಕ್ RCB ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದುವರೆಗೆ ಆಡಿದ 12 ಪಂದ್ಯಗಳಲ್ಲಿ ಕಾರ್ತಿಕ್ 8 ಬಾರಿ ಅಜೇಯರಾಗಿ ಉಳಿದಿದ್ದಾರೆ. ಅವರು ಔಟಾಗದೆ ಉಳಿದ ಪಂದ್ಯಗಳಲ್ಲಿ ಆರ್ಸಿಬಿ ಸೋತಿದ್ದು ಬಹಳ ಅಪರೂಪ. ಹೀಗಾಗಿ ಆರ್ಸಿಬಿ ತಂಡದ ಮ್ಯಾಚ್ ಫಿನಿಶರ್ ಆಗಿ ಡಿಕೆ ಹೊಸ ಹವಾ ಸೃಷ್ಟಿಸಿದ್ದಾರೆ.
20ನೇ ಓವರ್ನಲ್ಲಿ ಸಿಡಿಲಬ್ಬರ:
ಐಪಿಎಲ್ 2022 ರಲ್ಲಿ ದಿನೇಶ್ ಕಾರ್ತಿಕ್ 20ನೇ ಓವರ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೊನೆಯ ಓವರ್ನಲ್ಲಿ ಅವರು ಇಲ್ಲಿಯವರೆಗೆ 23 ಎಸೆತಗಳನ್ನು ಎದುರಿಸಿದ್ದಾರೆ. ಈ 23 ಎಸೆತಗಳಲ್ಲಿ ಬರೋಬ್ಬರಿ 71 ರನ್ ಬಾರಿಸಿ ಅಬ್ಬರಿಸಿದ್ದಾರೆ. ವಿಶೇಷವೆಂದರೆ ಈ ಸೀಸನ್ನಲ್ಲಿ ಡಿಕೆ 20ನೇ ಓವರ್ನಲ್ಲಿ ಔಟಾಗಿಲ್ಲ. ಹಾಗೆಯೇ ಕೊನೆಯ ಓವರ್ನಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ಗಳನ್ನು ಬಾರಿಸಿ ಪರಾಕ್ರಮ ಮರೆದಿದ್ದಾರೆ. ಹೀಗಾಗಿಯೇ ಎದುರಾಳಿ ತಂಡದ ಬೌಲರ್ಗಳಿಗೆ ಡಿಕೆಗೆ 20ನೇ ಓವರ್ ಎಸೆಯುವುದು ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 15 ನೇ ಸೀಸನ್ನಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರದರ್ಶನವು ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ಪ್ರಸಕ್ತ ಸೀಸನ್ನಲ್ಲಿ 12 ಪಂದ್ಯಗಳಲ್ಲಿ 274 ರನ್ ಗಳಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧ ಶತಕವನ್ನೂ ಗಳಿಸಿದ್ದಾರೆ. ಹಾಗೆಯೇ 12 ಪಂದ್ಯಗಳಲ್ಲಿ 21 ಬೌಂಡರಿ ಮತ್ತು 21 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಡಿಕೆಯ ಅದ್ಭುತ ಬ್ಯಾಟಿಂಗ್ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರ-4ರಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಲೀಗ್ ಹಂತದಲ್ಲಿ ಆರ್ಸಿಬಿಗೆ 2 ಪಂದ್ಯಗಳು ಉಳಿದಿದ್ದು, ಈ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ಗೇರುವ ಇರಾದೆಯಲ್ಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.