Namibia vs Uganda: ವಿಂಡ್ಹೋಕ್ನ ಯುನೈಟೆಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಉಗಾಂಡ (Uganda) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನಮೀಬಿಯಾ (Namibia) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉಗಾಂಡ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಉಗಾಂಡ ತಂಡಕ್ಕೆ ರೊನಾಲ್ಡ್ ಲುತಾಯಾ (25) ಹಾಗೂ ರಾಬಿನ್ಸನ್ ಒಬುಯಾ (27) ಉತ್ತಮ ಆರಂಭ ಒದಗಿಸಿದ್ದರು.
ಆದರೆ ಆ ಬಳಿಕ ದಿಢೀರ್ ಕುಸಿತಕ್ಕೊಳಗಾದ ಉಗಾಂಡಗೆ ದಿನೇಶ್ ನಕ್ರಾಣಿ ಆಸರೆಯಾದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ದಿನೇಶ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 45 ಎಸೆತಗಳನ್ನು ಎದುರಿಸಿದ ದಿನೇಶ್ ನಕ್ರಾಣಿ 13 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ 110 ರನ್ ಸಿಡಿಸಿದರು.
ದಿನೇಶ್ ನಕ್ರಾಣಿ ಅವರ ಈ ಸಿಡಿಬ್ಬರದ ಶತಕದ ನೆರವಿನಿಂದ ಉಗಾಂಡ ತಂಡವು 6 ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿತು.
204 ರನ್ಗಳ ಕಠಿಣ ಗುರಿ ಪಡೆದ ನಮೀಬಿಯಾ ತಂಡವು 16 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಹಾಗೂ ಜಾನ್ ಫ್ರೈಲಿಂಕ್ ಅಬ್ಬರಿಸಿದರು. 3ನೇ ವಿಕೆಟ್ಗೆ 98 ರನ್ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಈ ಹಂತದಲ್ಲಿ 40 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 80 ರನ್ ಬಾರಿಸಿದ ಗೆರ್ಹಾರ್ಡ್ ಎರಾಸ್ಮಸ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಜಾನ್ ಫ್ರೈಲಿಂಕ್ ಉಗಾಂಡ ಬೌಲರ್ಗಳ ಬೆಂಡೆತ್ತಿದರು.
ಅಲ್ಲದೆ 48 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 93 ರನ್ ಬಾರಿಸುವ ಮೂಲಕ 19.5 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ನಮೀಬಿಯಾ ತಂಡವು 5 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ನಮೀಬಿಯಾ ಪ್ಲೇಯಿಂಗ್ 11: ಮೈಕೆಲ್ ವ್ಯಾನ್ ಲಿಂಗೆನ್ , ನಿಕೋಲಾಸ್ ಡೇವಿನ್ , ಗೆರ್ಹಾರ್ಡ್ ಎರಾಸ್ಮಸ್ (ನಾಯಕ) , ಜೆಜೆ ಸ್ಮಿಟ್ , ಜಾನ್ ಫ್ರಿಲಿಂಕ್ , ಝೇನ್ ಗ್ರೀನ್ (ವಿಕೆಟ್ ಕೀಪರ್) , ಗೆರ್ಹಾರ್ಡ್ ಜಾನ್ಸ್ ವ್ಯಾನ್ ರೆನ್ಸ್ಬರ್ಗ್ , ರೂಬೆನ್ ಟ್ರಂಪೆಲ್ಮನ್ , ಪಿಕ್ಕಿ ಯಾ ಫ್ರಾನ್ಸ್ , ಬೆನ್ ಶಿಕೊಂಗೊ , ಜ್ಯಾಕ್ ಬ್ರುಸೆಲ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
ಉಗಾಂಡ ಪ್ಲೇಯಿಂಗ್ 11: ರಾಬಿನ್ಸನ್ ಒಬುಯಾ , ರೊನಾಲ್ಡ್ ಲುತಾಯಾ , ಕೆನ್ನೆತ್ ವೈಸ್ವಾ , ಅಲ್ಪೇಶ್ ರಾಮ್ಜಾನಿ , ದಿನೇಶ್ ನಕ್ರಾಣಿ , ಬ್ರಿಯಾನ್ ಮಸಾಬ (ನಾಯಕ) , ಸೈರಸ್ ಕಾಕುರು (ವಿಕೆಟ್ ಕೀಪರ್) , ಪಿಯುಸ್ ಒಲೋಕಾ , ಫ್ರಾಂಕ್ ನ್ಸುಬುಗಾ , ಬಿಲಾಲ್ ಹಸನ್ , ಜೋಸೆಫ್ ಬಾಗುಮಾ.