ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ನೇಪಾಳ ಕ್ರಿಕೆಟ್ ತಂಡ ವಿಶ್ವ ದಾಖಲೆ ಸೃಷ್ಟಿಸಿದೆ. ಬುಧವಾರ ಮಂಗೋಲಿಯಾ ವಿರುದ್ಧ (Nepal vs Mongolia) ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ದಾಖಲೆಯ 314 ರನ್ ಕಲೆಹಾಕಿದೆ. ಈ ಮೂಲಕ ಟಿ20ಯಲ್ಲಿ ಅತಿ ದೊಡ್ಡ ಸ್ಕೋರ್ ದಾಖಲಿಸಿದ ವಿಶ್ವ ದಾಖಲೆಯನ್ನು ಈ ತಂಡ ನಿರ್ಮಿಸಿದೆ. ಇದೇ ಪಂದ್ಯದಲ್ಲಿ ನೇಪಾಳದ ಬ್ಯಾಟ್ಸ್‌ಮನ್ ಕುಶಾಲ್ ಮಲ್ಲ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರ ವಿಶ್ವದಾಖಲೆಯನ್ನೂ ಸಹ ಮುರಿದಿದ್ದಾರೆ. ಮಂಗೋಲಿಯಾ ವಿರುದ್ಧ 34 ಎಸೆತಗಳಲ್ಲಿ ಶತಕ ಪೂರೈಸಿದ ಕುಶಾಲ್ ಮಲ್ಲ (Kushal Malla) ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ. 2017ರಲ್ಲಿ ಇಂದೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು.
ನೇಪಾಳ ತಂಡದ ಈ ಯುವ ಬ್ಯಾಟರ್ ಕುಶಾಲ್ ಮಲ್ಲ 50 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 137 ರನ್ ಸಿಡಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. 2017 ರ ಅಕ್ಟೋಬರ್ 29 ರಂದು ಬಾಂಗ್ಲಾದೇಶದ ವಿರುದ್ಧ ಮಿಲ್ಲರ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರೆ, ರೋಹಿತ್ ಎರಡು ತಿಂಗಳ ನಂತರ ಅಂದರೆ ಡಿಸೆಂಬರ್ 22 ರಂದು ಅದೇ ಸಾಧನೆ ಮಾಡಿದ್ದರು.
ನೇಪಾಳ ಆಟಗಾರನ ಕನಸನ್ನು ನನಸು ಮಾಡಿದ ಕೊಹ್ಲಿ: ನೇಪಾಳ ಡ್ರೆಸ್ಸಿಂಗ್ ರೂಮ್ನಲ್ಲಿ ಏನೆಲ್ಲ ಆಯ್ತು ನೋಡಿ
ಇದು ಟಿ20ಯಲ್ಲಿ ಕುಶಾಲ್ ಮಲ್ಲ ಅವರ ಮೊದಲ ಶತಕವಾಗಿದೆ. ಇದಕ್ಕೂ ಮುನ್ನ ಅವರು 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು ಆದರೆ ಒಂದರಲ್ಲಿಯೂ ಶತಕ ಸಿಡಿಸಿರಲಿಲ್ಲ. ಐದನೇ ಓವರ್ನ ಐದನೇ ಎಸೆತದಲ್ಲಿ ಆಸಿಪ್ ಶೇಖ್ ವಿಕೆಟ್ ಕಳೆದುಕೊಂಡ ನಂತರ ಕ್ರೀಸ್ಗೆ ಕಾಲಿಟ್ಟ ಕುಶಾಲ್ ಮಲ್ಲ ಇಲ್ಲಿಂದ ಮಂಗೋಲಿಯಾ ಬೌಲರ್‌ಗಳ ಬೆವರಿಳಿಸಿದರು.
ಒಂದೆಡೆ ಕುಶಾಲ್ ಮಲ್ಲ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರೆ, ಮತ್ತೊಂದೆಡೆ, ದೀಪೇಂದ್ರ ಸಿಂಗ್ ಕೂಡ ಕುಶಾಲ್ಗೆ ಸಾಥ್ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿದರೆ ನೇಪಾಳ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕುಶಾಲ್ ಭುರ್ಟೆಲ್ 23 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 19 ರನ್ಗಳ ಕೊಡುಗೆ ನೀಡಿದರು. ನಾಯಕ ರೋಹಿತ್ ಪೌಡೆಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 21 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ 61 ರನ್ ಚಚ್ಚಿದರು. ಅವರ ಹಿಂದೆ ಬಂದ ದೀಪೇಂದ್ರ ಅವರು ಬಂದ ಕೂಡಲೇ ಬಿರುಗಾಳಿ ಎಬ್ಬಿಸಿ, ಒಂಬತ್ತು ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದು ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಅತಿವೇಗದ ಅರ್ಧಶತಕ ಎಂಬ ದಾಖಲೆಯನ್ನೂ ಬರೆಯಿತು. ಅಂತಿಮವಾಗಿ ದೀಪೇಂದ್ರ ಅವರು 10 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳ ಸಹಾಯದಿಂದ ಅಜೇಯ 52 ರನ್ ಕಲೆಹಾಕಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Wed, 27 September 23