
2025 ರ ಐಪಿಎಲ್ (IPL 2025) ಮುಗಿದಿದ್ದು, ಭಾರತ ಯುವ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಅಲ್ಲಿ ಈಗಾಗಲೇ ಅಭ್ಯಾಸವನ್ನು ಆರಂಭಿಸಿವೆ. ಇತ್ತ ಭಾರತದಲ್ಲಿ ಐಪಿಎಲ್ ಮುಗಿದಿದ್ದರೂ, ಟಿ20 ಲೀಗ್ನ ಜಾತ್ರೆ ಮುಂದುವರೆದಿದೆ. ಪ್ರಸ್ತುತ ಭಾರತದಲ್ಲಿ ವಿವಿಧ ಕ್ರಿಕೆಟ್ ಸಂಸ್ಥೆಗಳು ಟಿ20 ಲೀಗ್‌ಗಳನ್ನು ಆಯೋಜಿಸುತ್ತಿವೆ. ಅದರಂತೆ ಮಹಾರಾಷ್ಟ್ರದಲ್ಲಿಯೂ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (Maharashtra Premier League) ನಡೆಯುತ್ತಿದ್ದು, ಇದರಲ್ಲಿ 31 ವರ್ಷದ ದಿವ್ಯಾಂಗ್ ಹಿಂಗನೇಕರ್ ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮಹಾರಾಷ್ಟ್ರ ಟಿ20 ಲೀಗ್‌ನಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಆಡಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಾರಂಭವಾದ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ 2025 ರ ಸೀಸನ್‌ನಲ್ಲಿ 5 ನೇ ಪಂದ್ಯ ಇಂದು ಅಂದರೆ, ಜೂನ್ 7 ರ ಶನಿವಾರದಂದು ರತ್ನಗಿರಿ ಜೆಟ್ಸ್ ಮತ್ತು ಕೊಲ್ಹಾಪುರ ಟಸ್ಕರ್ಸ್ ನಡುವೆ ನಡೆಯಿತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರತ್ನಗಿರಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 173 ರನ್ ಕಲೆಹಾಕಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲಲ್ಲ. ಏಕೆಂದರೆ ಕೇವಲ 3 ರನ್‌ಗಳಿಗೆ ತಂಡದ ಪ್ರಮುಖ 4 ವಿಕೆಟ್‌ಗಳು ಪತನಗೊಂಡವು. ಆದರೆ ಆ ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಇನ್ನಿಂಗ್ಸ್ ಆಡಿ ತಂಡವನ್ನು ಬೃಹತ್ ಸ್ಕೋರ್‌ಗೆ ಕೊಂಡೊಯ್ದರು.
ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬಂದ ಕ್ಯಾಪ್ಟನ್ ಅಜೀಂ ಕಾಜಿ ಮತ್ತು ದಿವ್ಯಾಂಗ್ 92 ರನ್‌ಗಳ ಜೊತೆಯಾಟ ನಡೆಸಿದರು. ಈ ಜೊತೆಯಾಟದಲ್ಲಿ ದಿವ್ಯಾಂಗ್ ಅವರದ್ದೇ ಸಿಂಹಪಾಲು. ಅವರು ಕೇವಲ 26 ಎಸೆತಗಳಲ್ಲಿ 58 ರನ್ ಗಳಿಸಿದರು. ವಿಶೇಷವಾಗಿ ಅವರು ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿ ಇಡೀ ಕ್ರೀಡಾಂಗಣವೇ ಹುಚ್ಚೆದ್ದು ಕುಣಿಯುವಂತೆ ಮಾಡಿದರು.
11 ನೇ ಓವರ್ ಬೌಲ್ ಮಾಡಿದ ಅಥರ್ವ ದಕ್ವೆ ಅವರ ಮೊದಲ 5 ಎಸೆತಗಳಲ್ಲಿ ದಿವ್ಯಾಂಗ್ ಸತತ 5 ಸಿಕ್ಸರ್‌ಗಳನ್ನು ಬಾರಿಸಿದರು. ಆದರೆ ಅದೇ ಓವರ್‌ನಲ್ಲಿ ಅವರು ಆರನೇ ಸಿಕ್ಸರ್ ಹೊಡೆಯುವುದನ್ನು ತಪ್ಪಿಸಿಕೊಂಡರೂ, ರತ್ನಗಿರಿ ಆ ಓವರ್‌ನಿಂದ ಒಟ್ಟು 32 ರನ್‌ಗಳನ್ನು ಕಲೆಹಾಕಿತು.
ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಆಡುವ ದಿವ್ಯಾಂಗ್ ಹಿಂಗಾನೇಕರ್, ತಮ್ಮ ಇನ್ನಿಂಗ್ಸ್ನಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಅವರನ್ನು ಹೊರತುಪಡಿಸಿ, ನಾಯಕ ಕಾಜಿ 38 ಎಸೆತಗಳಲ್ಲಿ 47 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ನಿಖಿಲ್ ನಾಯಕ್ ಕೇವಲ 28 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು 173 ರನ್‌ಗಳ ಬಲವಾದ ಸ್ಕೋರ್‌ಗೆ ಕೊಂಡೊಯ್ದರು. ಮಹಾರಾಷ್ಟ್ರ ಪರ ಮೂರು ಸ್ವರೂಪಗಳಲ್ಲಿ ಆಡಿರುವ ಹಿಂಗಾನೇಕರ್ ಇದುವರೆಗೆ 40 ಟಿ20 ಪಂದ್ಯಗಳನ್ನು ಆಡಿದ್ದು,, ಇದರಲ್ಲಿ ಅವರು 297 ರನ್‌ಗಳ ಜೊತೆಗೆ 30 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ