Dodda Ganesh: ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕನ್ನಡಿಗ ದೊಡ್ಡ ಗಣೇಶ್ ವಜಾ

|

Updated on: Sep 14, 2024 | 7:34 PM

Dodda Ganesh: ಕೇವಲ 30 ದಿನಗಳ ಹಿಂದಷ್ಟೇ ಅಂದರೆ ಆಗಸ್ಟ್ 14 ರಂದು ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಇದೀಗ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ.

Dodda Ganesh: ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕನ್ನಡಿಗ ದೊಡ್ಡ ಗಣೇಶ್ ವಜಾ
ದೊಡ್ಡ ಗಣೇಶ್
Follow us on

ಕೇವಲ 30 ದಿನಗಳ ಹಿಂದಷ್ಟೇ ಅಂದರೆ ಆಗಸ್ಟ್ 14 ರಂದು ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಇದೀಗ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ವರದಿಯ ಪ್ರಕಾರ, ಸ್ಥಾಪಿತ ಕಾರ್ಯವಿಧಾನಗಳನ್ನು ಅನುಸರಿಸದ ಕಾರಣ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ದೊಡ್ಡ ಗಣೇಶ್ ಅವರ ನೇಮಕವನ್ನು ಕಾರ್ಯಕಾರಿ ಮಂಡಳಿಯು ಅನುಮೋದಿಸಲು ನಿರಾಕರಿಸಿದೆ ಎಂದು ಗಣೇಶ್ ಅವರಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಒಪ್ಪಂದಕ್ಕೆ ಬದ್ಧವಾಗಿಲ್ಲ

ಗಣೇಶ್ ಅವರಿಗೆ ಕಳುಹಿಸಿರುವ ಪತ್ರದಲ್ಲಿ, ‘ಮನೋಜ್ ಪಟೇಲ್ ಮತ್ತು ನಿಮ್ಮ ನಡುವೆ 2024ರ ಆಗಸ್ಟ್ 7 ರಂದು ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಮೇಲಿನವುಗಳಿಗೆ ಒಳಪಟ್ಟು, ಕ್ರಿಕೆಟ್ ಕೀನ್ಯಾವು ಹೇಳಿದ ಒಪ್ಪಂದಕ್ಕೆ ಬದ್ಧವಾಗಿಲ್ಲ ಮತ್ತು ಬದ್ಧವಾಗಿರುವುದಿಲ್ಲ. ಆದ್ದರಿಂದ ತಕ್ಷಣವೇ ಜಾರಿಗೆ ಬರುವಂತೆ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಯಾವುದೇ ರೀತಿಯ ವ್ಯವಹಾರಗಳನ್ನು ನಡೆಸದಂತೆ ನಿಮಗೆ ನಿರ್ದೇಶಿಸಲಾಗಿದೆ ಎಂದು ಬರೆಯಲಾಗಿದೆ.

ವಾಸ್ತವವಾಗಿ ಈ ತಿಂಗಳು ಆರಂಭವಾಗಬೇಕಿದ್ದ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್‌ನಿಂದ ಕೀನ್ಯಾ ತಂಡದ ಮುಖ್ಯ ಕೋಚ್ ಆಗಿ ದೊಡ್ಡ ಗಣೇಶ್ ಅಧಿಕಾರವಹಿಸಿಕೊಳ್ಳಬೇಕಿತ್ತು. ಈ ಟೂರ್ನಿಯಲ್ಲಿ ಕೀನ್ಯಾ ತಂಡ, ಪಪುವಾ ನ್ಯೂಗಿನಿಯಾ, ಕತಾರ್, ಡೆನ್ಮಾರ್ಕ್ ಮತ್ತು ಜೆರ್ಸಿ ವಿರುದ್ಧ ಪಂದ್ಯಗಳನ್ನು ಆಡಬೇಕಿತ್ತು. ಇದಾದ ಬಳಿಕ ಅಕ್ಟೋಬರ್‌ನಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಆಫ್ರಿಕಾ ಕ್ವಾಲಿಫೈಯರ್‌ನಲ್ಲೂ ತಂಡ ಭಾಗವಹಿಸಬೇಕಿತ್ತು. ಆದರೆ, 1 ತಿಂಗಳೊಳಗೆ ಅಂದರೆ ಅಧಿಕಾರವಹಿಸಿಕೊಳ್ಳುವ ಮುನ್ನವೇ ದೊಡ್ಡ ಗಣೇಶ್ ಅವರನ್ನು ಕ್ರಿಕೆಟ್ ಕೀನ್ಯಾ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿದೆ.

ದೊಡ್ಡ ಗಣೇಶ್ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಂಡಿರುವ ಕಾರಣದಿಂದಾಗಿ ಮಾಜಿ ಕ್ರಿಕೆಟಿಗರಾದ ಲ್ಯಾಮೆಕ್ ಒನ್ಯಾಂಗೊ ಮತ್ತು ಜೋಸೆಫ್ ಅಂಗಾರ ಅವರು ಕೀನ್ಯಾ ಪುರುಷರ ತಂಡದ ಮುಖ್ಯ ಕೋಚ್ ಮತ್ತು ಸಹಾಯಕ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ದೊಡ್ಡ ಗಣೇಶ್ ವೃತ್ತಿಜೀವನ

ಕನ್ನಡಿಗ ದೊಡ್ಡ ಗಣೇಶ್ ಭಾರತದ ಪರ ನಾಲ್ಕು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ಐದು ವಿಕೆಟ್‌ಗಳನ್ನು ಮತ್ತು ಒಂದು ಏಕದಿನದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 104 ಪಂದ್ಯಗಳನ್ನಾಡಿದ್ದ ಗಣೇಶ್ ಅವರು 365 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪೈಕಿ 36 ರನ್‌ಗಳಿಗೆ ಏಳು ವಿಕೆಟ್‌ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ . ಹಾಗೆಯೇ ಲಿಸ್ಟ್-ಎಯಲ್ಲಿ 89 ಪಂದ್ಯಗಳನ್ನಾಡಿರುವ ಅವರು 128 ವಿಕೆಟ್ಗಳನ್ನು ಪಡೆದಿದ್ದರು. 27 ರನ್‌ಗಳಿಗೆ ಐದು ವಿಕೆಟ್‌ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಬೌಲಿಂಗ್​ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿರುವ ದೊಡ್ಡ ಗಣೇಶ್,​ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18.39 ಸರಾಸರಿಯಲ್ಲಿ 2023 ರನ್ ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:16 pm, Sat, 14 September 24