ಡೋಮ್ ಸಿಬ್ಲಿ ತ್ರಿಶತಕ… 126 ವರ್ಷಗಳ ಬಳಿಕ ದಾಖಲೆ ಮೊತ್ತ ಪೇರಿಸಿದ ಸರ್ರೆ
Surrey vs Durham: ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ ಪರ ಆರಂಭಿಕ ದಾಂಡಿಗ ಡೋಮ್ ಸಿಬ್ಲಿ ಭರ್ಜರಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. ಈ ಟ್ರಿಪಲ್ ಸೆಂಚುರಿ ನೆರವಿನೊಂದಿಗೆ ಸರ್ರೆ ತಂಡವು ಮೊದಲ ಇನಿಂಗ್ಸ್ನಲ್ಲಿ 820 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಡರ್ಹಾಮ್ 1 ವಿಕೆಟ್ ಕಳೆದುಕೊಂಡು 59 ರನ್ ಕಲೆಹಾಕಿದೆ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ ಟೆಸ್ಟ್ ಟೂರ್ನಿಯ 42ನೇ ಪಂದ್ಯದಲ್ಲಿ ಡೋನ್ ಸಿಬ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಹಾಮ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸರ್ರೆ ತಂಡಕ್ಕೆ ರೋರಿ ಬರ್ನ್ಸ್ ಹಾಗೂ ಡೋಮ್ ಸಿಬ್ಲಿ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 95 ರನ್ ಪೇರಿಸಿದ ಬಳಿಕ ರೋರಿ ಬರ್ನ್ಸ್ (54) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಿಯಾನ್ ಪಟೇಲ್ (10) ಕೂಡ ಬೇಗನೆ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಡೋಮ್ ಸಿಬ್ಲಿ ಹಾಗೂ ಸ್ಯಾಮ್ ಕರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಮೂರನೇ ವಿಕೆಟ್ಗೆ 178 ರನ್ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ 124 ಎಸೆತಗಳಲ್ಲಿ 108 ರನ್ ಬಾರಿಸಿದ್ದ ಸ್ಯಾಮ್ ಕರನ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಡೋಮ್ ಸಿಬ್ಲಿ ತ್ರಿಶತಕ ಸಿಡಿಸುವ ಮೂಲಕ ತಂಡದ ಸ್ಕೋರ್ ಅನ್ನು 700 ರ ಗಡಿದಾಟಿಸಿದರು. ಅಂತಿಮವಾಗಿ 475 ಎಸೆತಗಳನ್ನು ಎದುರಿಸಿದ ಸಿಬ್ಲಿ 29 ಫೋರ್ ಹಾಗೂ 2 ಸಿಕ್ಸ್ನೊಂದಿಗೆ 305 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
ಇದಾದ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿಲ್ ಜಾಕ್ಸ್ ಕೇವಲ 94 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 119 ರನ್ ಬಾರಿಸಿದರು. ಈ ಮೂಲಕ ಸರ್ರೆ ತಂಡವು ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 820 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ದಾಖಲೆಯ ಮೊತ್ತ:
820 ರನ್ಗಳು ಕೌಂಟಿ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಸರ್ರೆ ತಂಡ ಕಲೆಹಾಕಿದ ದಾಖಲೆಯ ಮೊತ್ತ ಎಂಬುದು ವಿಶೇಷ. ಇದಕ್ಕೂ ಮುನ್ನ 1899 ರಲ್ಲಿ ಸೋಮರ್‌ಸೆಟ್ ತಂಡದ ವಿರುದ್ಧ 811 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 820 ರನ್ಗಳಿಸುವ ಮೂಲಕ ಸರ್ರೆ ತಂಡವು 126 ವರ್ಷಗಳ ಬಳಿಕ ಮತ್ತೊಮ್ಮೆ ಗರಿಷ್ಠ ಸ್ಕೋರ್ಗಳಿಸುವಲ್ಲಿ ಯಶಸ್ವಿಯಾಗಿದೆ.
ಇದಾಗ್ಯೂ ಇದು ಕೌಂಟಿ ಚಾಂಪಿಯನ್ಶಿಪ್ ಇತಿಹಾಸದ ಗರಿಷ್ಠ ಮೊತ್ತವಲ್ಲ. ಈ ದಾಖಲೆ ಯಾರ್ಕ್‌ಷೈರ್ ತಂಡದ ಹೆಸರಿನಲ್ಲಿದೆ. 1896 ರಲ್ಲಿ ವಾರ್ವಿಕ್‌ಷೈರ್ ತಂಡದ ವಿರುದ್ಧ 887 ರನ್ ಕಲೆಹಾಕುವ ಮೂಲಕ ಯಾರ್ಕ್‌ಷೈರ್ ದಾಖಲೆ ನಿರ್ಮಿಸಿದೆ. 129 ವರ್ಷಗಳ ಹಿಂದೆ ಬರೆದ ಈ ದಾಖಲೆಯನ್ನು ಮುರಿಯಲು ಈವರೆಗೆ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಇದನ್ನೂ ಓದಿ: IPL 2026: ಐಪಿಎಲ್ ಟ್ರೇಡ್ ವಿಂಡೋ ಓಪನ್: ಯಾವ ತಂಡಕ್ಕೆ ಯಾರು?
ಕೌಂಟಿ ಚಾಂಪಿಯನ್ಶಿಪ್ ಇತಿಹಾಸದ ಗರಿಷ್ಠ ಸ್ಕೋರ್:
- 887 – ಯಾರ್ಕ್‌ಷೈರ್ vs ವಾರ್ವಿಕ್‌ಷೈರ್, ಎಡ್ಜ್‌ಬಾಸ್ಟನ್ (1896)
- 863 – ಲಂಕಾಷೈರ್ vs ಸರ್ರೆ, ದಿ ಓವಲ್ (1990)
- 850-7 ಡಿಕ್ಲೇರ್ಡ್ – ಸೋಮರ್‌ಸೆಟ್ vs ಮಿಡ್ಲ್‌ಸೆಕ್ಸ್, ಟೌಂಟನ್ (2007)
- 820-9 ಡಿಕ್ಲೇರ್ಡ್ – ಸರ್ರೆ vs ಡರ್ಹಾಮ್, ದಿ ಓವಲ್ (2025)
- 811 – ಸರ್ರೆ vs ಸೋಮರ್‌ಸೆಟ್, ದಿ ಓವಲ್ (1899)
