ದೇಶದ ಪ್ರಮುಖ ದೇಶೀ ಟೂರ್ನಿ ದುಲೀಪ್ ಟ್ರೋಫಿ ಇಂದಿನಿಂದ ಆರಂಭವಾಗಿದೆ. ಮೊದಲ ದಿನವೇ 2 ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಭಾರತ ಎ ತಂಡ ಭಾರತ ಬಿ ತಂಡವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎದುರಿಸುತ್ತಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ಸಿ ತಂಡ, ಭಾರತ ಡಿ ತಂಡವನ್ನು ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ಎದುರಿಸುತ್ತಿದೆ. ಇನ್ನು ಭಾರತ ಸಿ ಹಾಗೂ ಭಾರತ ಡಿ ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಡಿ ಮೊದಲ ಇನ್ನಿಂಗ್ಸ್ನಲ್ಲಿ 164 ರನ್ಗಳಿಗೆ ಆಲೌಟ್ ಆಗಿದೆ. ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಸಿ ತಂಡದ ಆರಂಭವೂ ವಿಶೇಷವೇನೂ ಆಗಿರಲಿಲ್ಲ. 14 ರನ್ ಗಳಿಸುವಷ್ಟರಲ್ಲಿ ತಂಡದ 2 ವಿಕೆಟ್‌ಗಳು ಪತನಗೊಂಡವು. ಸಾಯಿ ಸುದರ್ಶನ್ 7 ರನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ 19 ಎಸೆತಗಳಲ್ಲಿ 5 ರನ್ ಗಳಿಸಿದರು.
ಇದೇ ಭಾರತ ಸಿ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರು ಹರ್ಷಿತ್ ರಾಣಾ ಎಸೆತದಲ್ಲಿ ಶ್ರೀಕರ್ ಭರತ್ಗೆ ಕ್ಯಾಚಿತ್ತು ನಿರ್ಗಮಿಸಿದರು. ವೇಗಿ ರಾಣಾ, ಮೊದಲು ಸಾಯಿ ಸುದರ್ಶನ್ ನಂತರ ರುತುರಾಜ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ರುತುರಾಜ್ ವಿಕೆಟ್ ಪಡೆದ ನಂತರ, ಹರ್ಷಿತ್ ರಾಣಾ ಮೈದಾನದಲ್ಲಿಯೇ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ವಿಕೆಟ್ ಅನ್ನು ಸಂಭ್ರಮಿಸಿದರು. ಅವರ ಸಂಭ್ರಮಾಚರಣೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
— Gill Bill (@bill_gill76078) September 5, 2024
ವಾಸ್ತವವಾಗಿ ಇದೇ ರೀತಿಯ ಸಂಭ್ರಮಾಚರಣೆಯಿಂದಾಗಿ ಹರ್ಷಿತ್ ರಾಣಾ ದಂಡವನ್ನು ಪಾವತಿಸಿದಲ್ಲದೆ, ಒಂದು ಪಂದ್ಯದಿಂದ ನಿಷೇಧಕ್ಕೂ ಒಳಗಾಗಿದ್ದರು. 2024 ರ ಐಪಿಎಲ್ ಸಮಯದಲ್ಲಿ, ಹರ್ಷಿತ್ ರಾಣಾ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ಬಳಿಕ ಫ್ಲೈಯಿಂಗ್ ಕಿಸ್ ನೀಡಿ ಸಂಭ್ರಮಿಸಿದ್ದರು. ಈ ತಪ್ಪಿಗಾಗಿ, ರಾಣಾಗೆ ಪಂದ್ಯದ ಶುಲ್ಕದ ಶೇಕಡಾ 60 ರಷ್ಟು ದಂಡ ವಿಧಿಸಲಾಯಿತು.
ಆ ನಂತರವೂ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದ ರಾಣಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಅದೇ ರೀತಿಯ ಸಂಭ್ರಮಾಚರಣೆಯನ್ನು ಪುನರಾವರ್ತಿಸಿದರು. ಹೀಗಾಗಿ ಮತ್ತೊಮ್ಮೆ ಶಿಕ್ಷೆಗೆ ಒಳಗಾಗಿದ್ದ ರಾಣಾ, ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದಲ್ಲದೆ, 100 ಪ್ರತಿಶತ ಪಂದ್ಯ ಶುಲ್ಕವನ್ನು ದಂಡವಾಗಿ ಪಾವತಿಸಿದ್ದರು. ಆ ನಂತರ ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದ ರಾಣಾ, ಇದೀಗ ಮತ್ತೊಮ್ಮೆ ಅದೇ ರೀತಿಯ ತಪ್ಪನ್ನು ಮಾಡಿದ್ದಾರೆ. ಹೀಗಾಗಿ ರಾಣಾ ಅವರ ಈ ನಡೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದರೆ ಅವರು ಮತ್ತೊಮ್ಮೆ ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:26 pm, Thu, 5 September 24