Emerging Asia Cup 2024: ಹಾಲಿ ಚಾಂಪಿಯನ್ ಪಾಕಿಸ್ತಾನಕ್ಕೆ ಸೋಲು; ಫೈನಲ್ಗೇರಿದ ಶ್ರೀಲಂಕಾ
Emerging Asia Cup 2024: ಶ್ರೀಲಂಕಾ ಎ ತಂಡವು ಒಮಾನ್‌ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಉದಯೋನ್ಮುಖ ಏಷ್ಯಾಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡವನ್ನು ಸೋಲಿಸಿದೆ. ಪಾಕಿಸ್ತಾನ ನೀಡಿದ 135 ರನ್ಗಳ ಗುರಿಯನ್ನ ಶ್ರೀಲಂಕಾ ಸುಲಭವಾಗಿ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ಫೈನಲ್‌ಗೆ ಪ್ರವೇಶಿಸಿದೆ.
ಒಮಾನ್‌ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಶ್ರೀಲಂಕಾ ಎ ಹಾಗೂ ಪಾಕಿಸ್ತಾನ ಎ ತಂಡಗಳ ನಡುವಿನ ಉದಯೋನ್ಮುಖ ಟೀಂ ಏಷ್ಯಾಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡವನ್ನು ಮಣಿಸಿದ ಶ್ರೀಲಂಕಾ ಎ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಇಟ್ಟಿದೆ. ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ 16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದೀಗ ಇಂದು ಸಂಜೆ ನಡೆಯಲ್ಲಿರುವ ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಪಂದ್ಯಾವಳಿಯಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡ ಲೀಗ್ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಇತ್ತ ಎ ಗುಂಪಿನಲ್ಲಿದ್ದ ಶ್ರೀಲಂಕಾ ತಂಡ ಲೀಗ್ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ಗೆ ಕಾಲಿಟ್ಟಿತ್ತು. ಉಭಯ ತಂಡಗಳ ನಡುವಿನ ಈ ಕಾಳಗದಲ್ಲಿ ಪಾಕಿಸ್ತಾನವೇ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಲಂಕಾ ತಂಡದ ಸಾಂಘೀಕ ಹೋರಾಟಕ್ಕೆ ಹಾಲಿ ಚಾಂಪಿಯನ್ ಸೋಲಿಗೆ ಕೊರಳೊಡ್ಡಬೇಕಾಯಿತು.
ಪಾಕಿಸ್ತಾನಕ್ಕೆ ಕಳಪೆ ಆರಂಭ
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮೊದಲ ವಿಕೆಟ್ಗೆ 24 ರನ್ ಕಲೆಹಾಕುವಲ್ಲಿ ಆರಂಭಿಕ ಜೋಡಿ ಯಶಸ್ವಿಯಾಯಿತು. ಈ ವೇಳೆ ಯಾಸಿರ್ ಖಾನ್ 2 ರನ್ಗಳಿಸಿ ಔಟಾದರೆ, ಆ ನಂತರ ಬಂದ ನಾಯಕ ಮೊಹಮ್ಮದ್ ಹ್ಯಾರಿಸ್ 6 ರನ್ಗಳಿಗೆ ಸುಸ್ತಾದರು. 4ನೇ ಕ್ರಮಾಂಕದಲ್ಲಿ ಬಂದ ಖಾಸಿಂ ಅಕ್ರಮ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೈದರಲ್ ಅಲಿ 14 ರನ್ಗಳ ಕಾಣಿಕೆ ನೀಡುವ ಮೂಲಕ ತಂಡವನ್ನು 90 ರ ಗಡಿ ದಾಟಿಸಿದರು.
ಆ ನಂತರ ಬಂದ ಯಾವ ಬ್ಯಾಟ್ಸ್ಮನ್ಗೂ ಒಂದಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಆದರೆ ತಂಡದ ಪರ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಒಮೈರ್ ಯೂಸುಫ್ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 68 ರನ್ ಬಾರಿಸಿ ತಂಡವನ್ನು 135 ರನ್ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
7 ವಿಕೆಟ್ಗಳಿಂದ ಗೆದ್ದ ಲಂಕಾ
ಇನ್ನು ಪಾಕಿಸ್ತಾನ ನೀಡಿದ 135 ರನ್ಗಳ ಅಲ್ಪ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೂ ಮೊದಲ ವಿಕೆಟ್ಗೆ 24 ರನ್ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಯಶೋದಾ ಲಂಕಾ ಕೇವಲ 11 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಆ ಬಳಿಕ ಜೊತೆಯಾದ ಲಹಿರು ಉದಾರ ಹಾಗೂ ಅಹಾನ್ ವಿಕ್ರಮಸಿಂಘೆ ಅರ್ಧಶತಕದ ಜೊತೆಯಾಟ ನಡೆಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಈ ವೇಳೆ ಲಹಿರು ಕೇವಲ 20 ಎಸೆತಗಳಲ್ಲಿ 43 ರನ್ ಬಾರಿಸಿ ಔಟಾದರೆ, ಕೊನೆಯವರೆಗೂ ಅಜೇಯರಾಗಿ ಉಳಿದ ವಿಕ್ರಮಸಿಂಘೆ 46 ಎಸೆತಗಳಲ್ಲಿ 52 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Fri, 25 October 24