Emerging Teams Asia Cup 2023: ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಎ (India A) ತಂಡಕ್ಕೆ ಸೋಲುಣಿಸಿ ಪಾಕಿಸ್ತಾನ್ ಎ (Pakistan A) ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೈವೋಲ್ಟೇಜ್ ಪೈಪೋಟಿ ನಿರೀಕ್ಷಿಸಲಾಗಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನದ ಅನುಭವಿ ಆಟಗಾರರು ಪಾರುಪತ್ಯ ಮರೆಯುವ ಮೂಲಕ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಯಶ್ ಧುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡಕ್ಕೆ ಸೈಮ್ ಅಯೂಬ್ (59) ಹಾಗೂ ಫರ್ಹಾನ್ (65) ಉತ್ತಮ ಆರಂಭ ಒದಗಿಸಿದ್ದರು. ಈ ಜೋಡಿಯು ಮೊದಲ ವಿಕೆಟ್ಗೆ 121 ರನ್ ಪೇರಿಸಿದರೆ, ಆ ಬಳಿಕ ಬಂದ ಒಮೈರ್ ಯೂಸುಫ್ 35 ರನ್ ಬಾರಿಸಿದರು.
ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಯ್ಯಬ್ ತಾಹಿರ್ ಅಕ್ಷರಶಃ ಅಬ್ಬರಿಸಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ದಂಡಿಸಿದ 29 ವರ್ಷದ ತಯ್ಯಬ್ ಕೇವಲ 66 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 71 ಎಸೆತಗಳಲ್ಲಿ 12 ಫೋರ್ ಹಾಗು 4 ಭರ್ಜರಿ ಸಿಕ್ಸ್ಗಳೊಂದಿಗೆ 108 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಮುಬಾಸಿರ್ ಖಾನ್ 35 ರನ್ಗಳ ಕೊಡುಗೆ ನೀಡಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಪಾಕಿಸ್ತಾನ್ ತಂಡದ ಮೊತ್ತವು 8 ವಿಕೆಟ್ ನಷ್ಟಕ್ಕೆ 352 ಕ್ಕೆ ಬಂದು ನಿಂತಿತು.
353 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸಾಯಿ ಸುದರ್ಶನ್ ಹಾಗೂ ಅಭಿಷೇಶ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಬಿರುಸಿನ ಬ್ಯಾಟಿಂಗ್ ಮೂಲಕ ಪಾಕ್ ಬೌಲರ್ಗಳ ಬೆಂಡೆತ್ತಿದ ಈ ಜೋಡಿ ಮೊದಲ 5 ಓವರ್ಗಳಲ್ಲೇ ತಂಡದ ಮೊತ್ತವನ್ನು 50 ರ ಗಡಿದಾಟಿಸಿದ್ದರು.
ಆದರೆ ಈ ಹಂತದಲ್ಲಿ ಸಾಯಿ ಸುದರ್ಶನ್ (29) ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ನಿಕಿನ್ ಜೋಸ್ (11) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು. ಅತ್ತ ಪಾಕ್ ಬೌಲರ್ಗಳು ಮೇಲುಗೈ ಸಾಧಿಸುತ್ತಿದ್ದಂತೆ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸಿದರು.
51 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 5 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 61 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಈ ಹಂತದಲ್ಲಿ ಸುಫಿಯಾನ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಯುವ ದಾಂಡಿಗ ಕ್ಯಾಚ್ ನೀಡಿ ಹೊರನಡೆದರು.
ಇದರ ಬೆನ್ನಲ್ಲೇ ನಿಶಾಂತ್ ಸಿಂಧು (10) ವಿಕೆಟ್ ಕೈಚೆಲ್ಲಿದರು. ಇನ್ನು ನಾಯಕ ಯಶ್ ಧುಲ್ 41 ಎಸೆತಗಳಲ್ಲಿ 39 ರನ್ ಬಾರಿಸಿದರೂ ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ 159 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಕ್ರೀಸ್ಗೆ ಆಗಮಿಸಿದ ರಿಯಾನ್ ಪರಾಗ್ 14 ರನ್ಗಳಿಸಿದರೆ, ಹರ್ಷಿತ್ ರಾಣಾ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಮ್ ಇಂಡಿಯಾ ಸೋಲು ಖಚಿತವಾಯಿತು. 35 ಓವರ್ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 205 ರನ್ಗಳಿಸಿತ್ತು. ಇನ್ನು 9ನೇ ವಿಕೆಟ್ ಆಗಿ ರಾಜವರ್ಧನ್ (11) ಕ್ಲೀನ್ ಬೌಲ್ಡ್ ಆದರು. ಹಾಗೆಯೇ ಅಂತಿಮವಾಗಿ ಯುವರಾಜ್ಸಿನ್ಹ್ (5) ಔಟಾಗುವುದರೊಂದಿಗೆ ಟೀಮ್ ಇಂಡಿಯಾ 40 ಓವರ್ಗಳಲ್ಲಿ 224 ರನ್ಗಳಿಗೆ ಸರ್ಪಪತನ ಕಂಡಿತು. ಇತ್ತ ಪಾಕಿಸ್ತಾನ್ ತಂಡವು 128 ರನ್ಗಳ ಭರ್ಜರಿ ಜಯ ಸಾಧಿಸಿ ಎಮರ್ಜಿಂಗ್ ಏಷ್ಯಾಕಪ್ ಅನ್ನು ತಮ್ಮದಾಗಿಸಿಕೊಂಡರು.
ಪಾಕಿಸ್ತಾನ್ ಎ ಪ್ಲೇಯಿಂಗ್ 11: ಸೈಮ್ ಅಯೂಬ್ , ಸಾಹಿಬ್ಜಾದಾ ಫರ್ಹಾನ್ , ಒಮೈರ್ ಯೂಸುಫ್ , ತಯ್ಯಬ್ ತಾಹಿರ್ , ಖಾಸಿಮ್ ಅಕ್ರಮ್ , ಮೊಹಮ್ಮದ್ ಹರಿಸ್ (ನಾಯಕ) , ಮುಬಾಸಿರ್ ಖಾನ್ , ಮೆಹ್ರಾನ್ ಮುಮ್ತಾಜ್ , ಮೊಹಮ್ಮದ್ ವಾಸಿಂ ಜೂನಿಯರ್ , ಅರ್ಷದ್ ಇಕ್ಬಾಲ್ , ಸುಫಿಯಾನ್ ಮುಖೀಮ್.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಅಭಿಷೇಕ್ ಶರ್ಮಾ , ನಿಕಿನ್ ಜೋಸ್ , ಯಶ್ ಧುಲ್ (ನಾಯಕ) , ರಿಯಾನ್ ಪರಾಗ್ , ನಿಶಾಂತ್ ಸಿಂಧು , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಹರ್ಷಿತ್ ರಾಣಾ , ರಾಜವರ್ಧನ್ ಹಂಗರ್ಗೇಕರ್ , ಯುವರಾಜಸಿನ್ಹ್ ದೋಡಿಯಾ.