IND A vs PAK A: ತಯ್ಯಬ್ ಶತಕ: ಭಾರತಕ್ಕೆ ಕಠಿಣ ಗುರಿ ನೀಡಿದ ಪಾಕಿಸ್ತಾನ್
Pakistan A vs India A, Final: ಕೊಲಂಬೊದಲ್ಲಿ ನಡೆಯುತ್ತಿರುವ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ಬೃಹತ್ ಮೊತ್ತ ಕಲೆಹಾಕಿದೆ.
India A vs Pakistan A: ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಎಮರ್ಜಿಂಗ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಎ ತಂಡವು ಬೃಹತ್ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಸೂಚಿಸುವಂತೆ ಪಾಕ್ ಆರಂಭಿಕರು ಇನಿಂಗ್ಸ್ ಆರಂಭಿಸಿದ್ದರು.
ಮೊದಲ ವಿಕೆಟ್ಗೆ 121 ರನ್ಗಳ ಜೊತೆಯಾಟವಾಡಿದ ಸೈಮ್ ಅಯ್ಯುಬ್ (59) ಹಾಗೂ ಫರ್ಹಾನ್ (65) ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಈ ಹಂತದಲ್ಲಿ ದಾಳಿಗಿಳಿದ ಮಾನವ್ ಸುತಾರ್ ಸೈಮ್ ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಫರ್ಹಾನ್ ಕೂಡ ರನೌಟ್ ಆದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಒಮೈರ್ ಯೂಸುಫ್ 35 ರನ್ಗಳ ಕಾಣಿಕೆ ನೀಡಿದರು. ಆದರೆ ಪಾಕ್ ತಂಡದ ಇನಿಂಗ್ಸ್ನ ಗತಿಯನ್ನೇ ಬದಲಿಸಿದ್ದು ತಯ್ಯಬ್ ತಾಹಿರ್. ಸ್ಪೋಟಕ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ ಬೌಲರ್ಗಳನ್ನು ದಂಡಿಸಿದ ತಯ್ಯಬ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅಲ್ಲದೆ ಕೇವಲ 66 ಎಸೆತಗಳಲ್ಲಿ ಶತಕ ಪೂರೈಸಿ ತಯ್ಯಬ್ ಅಬ್ಬರಿಸಿದರು. ಇನ್ನು ಶತಕದ ಬಳಿಕ ಕೂಡ ಬಿರುಸಿನ ಹೊಡೆತಕ್ಕೆ ಮುಂದಾಗಿ ರಾಜವರ್ಧನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಅಷ್ಟರಲ್ಲಾಗಲೇ ತಯ್ಯಬ್ ಕೇವಲ 71 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 108 ರನ್ಗಳಿಸಿದ್ದರು. ಅಲ್ಲದೆ ತಂಡದ ಮೊತ್ತವನ್ನು 300 ರ ಗಡಿದಾಟಿಸಿದ್ದರು.
ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮುಬಾಸಿರ್ ಖಾನ್ 35 ರನ್ಗಳ ಕೊಡುಗೆ ನೀಡಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಪಾಕಿಸ್ತಾನ್ ಎ ತಂಡವು 8 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ರಾಜವರ್ಧನ್ ಹಂಗರ್ಗೇಕರ್ ಹಾಗೂ ರಿಯಾನ್ ಪರಾಗ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಪಾಕಿಸ್ತಾನ್ ಎ ಪ್ಲೇಯಿಂಗ್ 11: ಸೈಮ್ ಅಯೂಬ್ , ಸಾಹಿಬ್ಜಾದಾ ಫರ್ಹಾನ್ , ಒಮೈರ್ ಯೂಸುಫ್ , ತಯ್ಯಬ್ ತಾಹಿರ್ , ಖಾಸಿಮ್ ಅಕ್ರಮ್ , ಮೊಹಮ್ಮದ್ ಹರಿಸ್ (ನಾಯಕ) , ಮುಬಾಸಿರ್ ಖಾನ್ , ಮೆಹ್ರಾನ್ ಮುಮ್ತಾಜ್ , ಮೊಹಮ್ಮದ್ ವಾಸಿಂ ಜೂನಿಯರ್ , ಅರ್ಷದ್ ಇಕ್ಬಾಲ್ , ಸುಫಿಯಾನ್ ಮುಖೀಮ್.
ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ
ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಅಭಿಷೇಕ್ ಶರ್ಮಾ , ನಿಕಿನ್ ಜೋಸ್ , ಯಶ್ ಧುಲ್ (ನಾಯಕ) , ರಿಯಾನ್ ಪರಾಗ್ , ನಿಶಾಂತ್ ಸಿಂಧು , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಹರ್ಷಿತ್ ರಾಣಾ , ರಾಜವರ್ಧನ್ ಹಂಗರ್ಗೇಕರ್ , ಯುವರಾಜಸಿನ್ಹ್ ದೋಡಿಯಾ.