Emerging Teams Asia Cup 2023: ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಟೂರ್ನಿಯ 10 ಪಂದ್ಯದಲ್ಲಿ ಶ್ರೀಲಂಕಾ ಎ ತಂಡವು 217 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇಲ್ಲಿ ಲಂಕಾ ತಂಡ ಅಮೋಘ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ಒಮಾನ್ ಎ ತಂಡದ ಪ್ರದರ್ಶನ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಎ ತಂಡದ ಪರ ಪಸಿಂದು ಸೂರಿಯಬಂಡಾರ (60) ಅರ್ಧಶತಕ ಬಾರಿಸಿ ಮಿಂಚಿದರೆ, ಸಹನ್ ಅರಚ್ಚಿಗೆ 48 ರನ್ಗಳ ಕಾಣಿಕೆ ನೀಡಿದರು. ಈ ಮೂಲಕ ಶ್ರೀಲಂಕಾ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 259 ರನ್ ಕಲೆಹಾಕಿತು.
260 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಒಮಾನ್ ತಂಡವು ಮೊದಲ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ ಶುರುವಾದ ಪೆವಿಲಿಯನ್ ಪೆರೇಡ್ ಬಂದು ನಿಂತಿದ್ದು 42 ರನ್ಗಳಿಗೆ. ಅಂದರೆ 17.1 ಓವರ್ಗಳಲ್ಲಿ ಕೇವಲ 42 ರನ್ಗಳಿಸಿ ಒಮಾನ್ ತಂಡವು ಆಲೌಟ್ ಆಗಿತ್ತು.
ಒಮಾನ್ ಪರ ಕಶ್ಯಪ್ ಪ್ರಜಾಪತಿ 18 ರನ್ಗಳಿಸಿದರೆ, ಸೂರಜ್ ಕುಮಾರ್ 10 ರನ್ ಕಲೆಹಾಕಿದರು. ಇನ್ನುಳಿದವರ ಸ್ಕೋರ್ ಕಾರ್ಡ್…0, 1, 1, 0, 6, 2, 0, 2, 1. ಅಂದರೆ 9 ಬ್ಯಾಟರ್ಗಳು ಜೊತೆಗೂಡಿ ಕಲೆಹಾಕಿದ್ದು ಕೇವಲ 13 ರನ್ಗಳು ಮಾತ್ರ.
ಇನ್ನು ಶ್ರೀಲಂಕಾ ಪರ ಚಾಮಿಕಾ ಕರುಣಾರತ್ನೆ 3 ವಿಕೆಟ್ ಪಡೆದು ಮಿಂಚಿದರೆ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್ ಹಾಗೂ ಲಹಿರು ಸಮರಕೋನ್ ತಲಾ 2 ವಿಕೆಟ್ ಕಬಳಿಸಿದರು.
ಶ್ರೀಲಂಕಾ ಪ್ಲೇಯಿಂಗ್ 11: ಅವಿಷ್ಕ ಫೆರ್ನಾಂಡೋ , ಲಸಿತ್ ಕ್ರೂಸ್ಪುಲ್ಲೆ , ಮಿನೋದ್ ಭಾನುಕ (ವಿಕೆಟ್ ಕೀಪರ್) , ಪಸಿಂದು ಸೂರಿಯಬಂಡಾರ , ಸಹನ್ ಅರಚ್ಚಿಗೆ , ಅಶೇನ್ ಬಂಡಾರ , ದುನಿತ್ ವೆಲ್ಲಲಾಗೆ (ನಾಯಕ) , ಚಾಮಿಕ ಕರುಣಾರತ್ನೆ , ದುಶನ್ ಹೇಮಂತ , ಪ್ರಮೋದ್ ಮಧುಶನ್ , ಲಹಿರು ಸಮರಕೋನ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್ ನ್ಯೂಸ್
ಒಮಾನ್ ಪ್ಲೇಯಿಂಗ್ 11: ಕಶ್ಯಪ್ ಪ್ರಜಾಪತಿ , ಜತೀಂದರ್ ಸಿಂಗ್ , ಅಕಿಬ್ ಇಲ್ಯಾಸ್ (ನಾಯಕ) , ಅಯಾನ್ ಖಾನ್ , ಶೋಯೆಬ್ ಖಾನ್ , ವಾಸಿಂ ಅಲಿ , ಸೂರಜ್ ಕುಮಾರ್ (ವಿಕೆಟ್ ಕೀಪರ್) , ರಫಿಯುಲ್ಲಾ , ಸಮಯ್ ಶ್ರೀವಾಸ್ತವ , ಜೇ ಒಡೆದ್ರಾ , ಕಲೀಮುಲ್ಲಾ.