Yuzvendra Chahal: ಕೊಹ್ಲಿ ನಾಯಕರಾಗಿದ್ದೂ ಕೂಡ ತಂಡದಲ್ಲಿ ಚಾನ್ಸ್ ಸಿಗದಿದ್ದಾಗ ನಾನು ಅತ್ತಿದ್ದೆ: ಯುಜ್ವೇಂದ್ರ ಚಹಲ್
ಈ ವಿಷಯದಲ್ಲಿ ನನಗೆ ತುಂಬಾ ವಿಚಿತ್ರವೆನಿಸುವ ಮತ್ತೊಂದು ಸಂಗತಿ ಎಂದರೆ, ಆ ಸಮಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ಜೊತೆಗೆ ಆರ್‌ಸಿಬಿ ಟೀಮ್ನ ನಾಯಕರಾಗಿದ್ದರು.
ಯುಎಇನಲ್ಲಿ ನಡೆದ 2021 ರ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿತ್ತು. 15 ಸದಸ್ಯರ ಪಟ್ಟಿ ಬಿಡುಗಡೆಯಾದಾಗ ಆ ಬಳಗದಲ್ಲಿ ಯುಜ್ವೇಂದ್ರ ಚಹಲ್ ಹೆಸರು ಕಾಣಿಸಿಕೊಂಡಿರಲಿಲ್ಲ. ಅಂದು ಟೀಮ್ ಇಂಡಿಯಾಗೆ ಸ್ಪಿನ್ನರ್ಗಳಾಗಿ ಆಯ್ಕೆಯಾಗಿದ್ದು ರವಿಚಂದ್ರನ್ ಅಶ್ವಿನ್, ರಾಹುಲ್ ಚಹರ್ ಹಾಗೂ ವರುಣ್ ಚಕ್ರವರ್ತಿ. ಇತ್ತ ಚಹಲ್ ಅವರನ್ನು ತಂಡದಿಂದ ಕೈ ಬಿಟ್ಟ ಆಯ್ಕೆ ಸಮಿತಿಯ ನಿರ್ಧಾರವನ್ನು ಹಲವು ಮಾಜಿ ಆಟಗಾರರು ಪ್ರಶ್ನಿಸಿದ್ದರು. ಆದರೆ ಈ ಬಗ್ಗೆ ಚಹಲ್ ಎಲ್ಲೂ ಕೂಡ ತುಟಿ ಪಿಟಿಕ್ ಎಂದಿರಲಿಲ್ಲ.
ಇದೀಗ ಇದೇ ಮೊದಲ ಬಾರಿ ಟೀಮ್ ಇಂಡಿಯಾಗೆ ಆಯ್ಕೆಯಾಗದಿರುವ ಬಗ್ಗೆ ಯುಜ್ವೇಂದ್ರ ಚಹಲ್ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಚಹಲ್, ಸಾಮಾನ್ಯವಾಗಿ ನಾನು ಹೆಚ್ಚು ಅಳುವುದಿಲ್ಲ. ಆದರೆ ಅಂದು ಮಾತ್ರ ತುಂಬಾ ಅತ್ತಿದ್ದೆ. ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಬಾತ್ ರೂಮಿಗೆ ಹೋಗಿ ಅಳುತ್ತಾ ನಿಂತಿದ್ದೆ.
ನನಗೆ ಚಾನ್ಸ್ ಸಿಕ್ಕಿಲ್ಲ ಎಂದಾಗ ತುಂಬಾ ನಿರಾಶೆಗೊಂಡಿದ್ದೆ. ಅದೇ ಸಮಯದಲ್ಲಿ ನಾವು ಯುಎಇನಲ್ಲಿ ಐಪಿಎಲ್ ಆಡುತ್ತಿದ್ದೆವು. ಆಗ ಪತ್ನಿ ಧನಶ್ರೀ ಸಹ ನನ್ನ ಜೊತೆಗಿದ್ದಳು. ಐಪಿಎಲ್ ಪಂದ್ಯಕ್ಕಾಗಿ ಮರುದಿನ ನಾವು ದುಬೈಗೆ ಹಾರಬೇಕಿತ್ತು. ದುಬೈಗೆ ಹೋದ ಬಳಿಕ ಅಲ್ಲಿ ನಾವು ಸುಮಾರು ಒಂದು ವಾರದವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಯಿತು. ಆ ವೇಳೆ ನನ್ನೊಂದಿಗೆ ಧನಶ್ರೀ ಕೂಡ ಇದ್ದಳು. ಇದರಿಂದ ನಾನು ನನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಯಿತು. ಆ ಸಮಯದಲ್ಲಿ ಅವಳು ನನ್ನೊಂದಿಗೆ ಇಲ್ಲದಿದ್ದರೆ, ಈ ವಿಷಯಗಳನ್ನು ನಿಯಂತ್ರಿಸುವುದು ನನಗೆ ಸುಲಭವಾಗುತ್ತಿರಲಿಲ್ಲ ಎಂದು ಚಹಲ್ ತಿಳಿಸಿದ್ದಾರೆ.
ಈ ವಿಷಯದಲ್ಲಿ ನನಗೆ ತುಂಬಾ ವಿಚಿತ್ರವೆನಿಸುವ ಮತ್ತೊಂದು ಸಂಗತಿ ಎಂದರೆ, ಆ ಸಮಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ಜೊತೆಗೆ ಆರ್‌ಸಿಬಿ ಟೀಮ್ನ ನಾಯಕರಾಗಿದ್ದರು. ಇದಾಗ್ಯೂ ನನಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಅದರ ಹಿಂದಿನ ಕಾರಣ ಇಂದಿಗೂ ನನಗೆ ಅರ್ಥವಾಗಿಲ್ಲ ಎಂದು ಚಹಲ್ ತಿಳಿಸಿದ್ದಾರೆ.
ಇನ್ನು ಆ ಸೀಸನ್ನಲ್ಲಿ ನಾನು ಆರ್‌ಸಿಬಿ ತಂಡದಲ್ಲಿದ್ದರೂ, ಟೀಮ್ ಇಂಡಿಯಾಗೆ ಆಯ್ಕೆಯಾಗದಿರುವ ಬಗ್ಗೆ ಒಮ್ಮೆಯೂ ನಾನು ವಿರಾಟ್ ಕೊಹ್ಲಿ ಜೊತೆ ಚರ್ಚಿಸಿಲ್ಲ. ಆ ಬಗ್ಗೆ ಪ್ರಶ್ನಿಸಿಯೂ ಕೂಡ ಇಲ್ಲ ಎಂದು ಚಹಲ್ ಇದೇ ವೇಳೆ ತಿಳಿಸಿದರು.
ಟೀಮ್ ಇಂಡಿಯಾ ಪರ ವಿಶ್ವಕಪ್ ಆಡುವ ಅವಕಾಶದ ನಿರೀಕ್ಷೆಯಲ್ಲಿದ್ದ ನನಗೆ ಅದೊಂದು ಶಾಕ್ ಆಗಿತ್ತು. ಆ ಕೆಟ್ಟ ಘಳಿಗೆಯಿಂದ ಹೊರಬರಲು ಧನಶ್ರೀ ಸಾಕಷ್ಟು ಸಹಾಯ ಮಾಡಿದ್ದಾರೆ. ಆ ವೇಳೆ ಆರ್‌ಸಿಬಿ ಇನ್ನೂ 7 ಪಂದ್ಯಗಳನ್ನಾಡಬೇಕಿತ್ತು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ತಮ್ಮನ್ನು ಸಾಬೀತುಪಡಿಸುವಂತೆ ಧನಶ್ರೀ ನನ್ನನ್ನು ಹುರಿದುಂಬಿಸಿದ್ದರು.
ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!
ನಿಮ್ಮೆಲ್ಲಾ ಕೋಪಗಳನ್ನು ಮೈದಾನದಲ್ಲೇ ಹೊರಹಾಕುವಂತೆ ಸಂಪೂರ್ಣವಾಗಿ ಅವಳು ಧೈರ್ಯ ತುಂಬಿದ್ದಳು. ಅದರಂತೆ ನಾನು ಐಪಿಎಲ್ ಅನ್ನು ಅತ್ಯುತ್ತಮ ಪ್ರದರ್ಶನದ ಮೂಲಕ ಅಂತ್ಯಗೊಳಿಸಿದೆ. ಇದರಿಂದ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿಲ್ಲ ಎಂಬ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದು ಯುಜ್ವೇಂದ್ರ ಚಹಲ್ ತಿಳಿಸಿದರು.