ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ (Chennai Super Kings vs Mumbai Indians) ನಡುವಿನ ಕದನ ಮತ್ತೊಂದು ಅದ್ಭುತ ಮುಖಾಮುಖಿಗೆ ಸಾಕ್ಷಿಯಾಗಿದೆ. ಈ ಆವೃತ್ತಿಯಲ್ಲಿ ಮುಂಬೈ ಹತ್ತನೇ ಮತ್ತು ಸಿಎಸ್‌ಕೆ ಒಂಬತ್ತನೇ ಸ್ಥಾನದಲ್ಲಿದ್ದು, ಎರಡೂ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನೀಡಿದವು. ಈ ಪಂದ್ಯದಲ್ಲಿ ಮುಂಬೈ ಗೆದ್ದಿದ್ದರೂ ಹಲವು ವಿಚಾರಗಳಿಂದ ಈ ಪಂದ್ಯ ಸಖತ್ ಸುದ್ದಿಯಲ್ಲಿದೆ. ಅದರಲ್ಲಿ ಅಂಪೈರ್ ಚಿಯರಾ ರವಿಕಾಂತರೆಡ್ಡಿ ಅವರ ತೀರ್ಪು ಸಹ ಒಂದು. ವೈಡ್ ಸಿಗ್ನಲ್ ಕೊಡಲು ಮುಂದಾಗಿ ತಕ್ಷಣ ಮನಸ್ಸು ಬದಲಾಯಿಸಿ ಔಟ್ ಸಿಗ್ನಲ್ ತೋರಿದ ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ. ಈ ವೀಡಿಯೊ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ನೆಟಿಜನ್‌ಗಳು ಈ ವಿಡಿಯೋಕ್ಕೆ ಫನ್ನಿ ಕಾಮೆಂಟ್‌ಗಳ ಮೂಲಕ ಅಂಪೈರ್ ತೀರ್ಮಾನವನ್ನು ಗೇಲಿ ಮಾಡಿದ್ದಾರೆ.
ನಡೆಯುತ್ತಿರುವ ಈ ಐಪಿಎಲ್‌ನಲ್ಲಿ ಅಂಪೈರಿಂಗ್ ಮಾನದಂಡಗಳು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿವೆ. ಕೆಟ್ಟ ನಿರ್ಧಾರಗಳಿಂದ ವಿವಾದಾತ್ಮಕ ತೀರ್ಪಿನವರೆಗೆ, ಅಂಪೈರ್‌ಗಳು ತಮ್ಮ ತಪ್ಪು ನಿರ್ದಾರಗಳಿಂದ ತಂಡಗಳ ಕಂಗಣ್ಣಿಗೆ ಗುರಿಯಾಗಿದ್ದಾರೆ.
ವೈಡ್ ಸಿಗ್ನಲ್ ನೀಡಲು ಹೋಗಿ ಔಟ್ ಕೊಟ್ಟ ಅಂಪೈರ್!
ಅಷ್ಟಕ್ಕೂ ಈ ಘಟನೆ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ನಡೆಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ ಮುಂಬೈ ಇನ್ನಿಂಗ್ಸ್ ಕಟ್ಟಲು ಕ್ರೀಸ್ಗೆ ಬಂದಿದ್ದ ಹೃತಿಕ್ ಶೋಕೀನ್ ಅವರು ಸಿಮರ್ಜೀತ್ ಸಿಂಗ್ ಅವರ ಅತ್ಯುತ್ತಮ ಇನ್ಸ್ವಿಂಗ್ ಎಸೆತವನ್ನು ಆಡಿದರು. ಆದರೆ, ಚೆಂಡು ಬ್ಯಾಟ್ಗೆ ತಗುಲುದೇ, ಸೊಂಟಕ್ಕೆ ಬಡಿದು ಧೋನಿ ಕೈಸೇರಿತು. ಕೂಡಲೇ ಧೋನಿ ಔಟ್ಗೆ ಅಂಪೈರ್ ಬಳಿ ಮನವಿ ಮಾಡಿದರು. ಜೊತೆಗೆ ಬೌಲರ್ ಕೂಡ ಏರು ಧ್ವನಿಯಲ್ಲಿ ಕೂಗಿ ಅಂಪೈರ್ ಕಡೆ ನೋಡಿ ಮನವಿ ಮಾಡಿದರು. ಕೂಡಲೇ ಅಂಪೈರ್ ತಮ್ಮ ಎರಡು ಕೈಗಳನ್ನು ಎತ್ತಿ ವೈಡ್ ಸಿಗ್ನಲ್ ನೀಡಲು ಮುಂದಾದರು. ಆದರೆ, ಧೋನಿ ಮನವಿಯನ್ನು ಗಮನಿಸಿದ ಅಂಪೈರ್ ಕೂಡಲೇ ತಮ್ಮ ನಿರ್ಧಾರ ಬದಲಿಸಿ ಬ್ಯಾಟರ್ ಹೃತಿಕ್ ಶೋಕೀನ್ ಔಟೆಂದು ಕೈ ಸಿಗ್ನಲ್ ತೋರಿದರು. ಆದರೆ ಚೆಂಡು ಬ್ಯಾಟ್ ಬದಲು ಸೊಂಟಕ್ಕೆ ಬಡಿದಿದೆ ಎಂಬುದನ್ನು ಖಚಿತವಾಗಿ ಅರಿತಿದ್ದ ಬ್ಯಾಟರ್ ಹೃತಿಕ್ ಶೋಕೀನ್ ರಿವ್ಯೂವ್ ಮೊರೆ ಹೋದರು. ರೆಫರಲ್ ನಂತರ, ಮೂರನೇ ಅಂಪೈರ್ ನಿತಿನ್ ಮೆನನ್ ಚೆಂಡು ಶೋಕೀನ್ ಸೊಂಟಕ್ಕೆ ಬಡಿದಿರುವುದನ್ನು ಖಚಿತ ಪಡಿಸಿದರು. ಅನಂತರ ಅಂಪೈರ್ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡು ನಾಟೌಟ್ ಎಂದು ಘೋಷಿಸಿದರು. ಆದರೆ ಇದೆಲ್ಲವನ್ನು ಗಮನಿಸಿದ ನೆಟಿಜನ್‌ಗಳು, ಧೋನಿ ಅವರ ಆತ್ಮವಿಶ್ವಾಸದ ಮನವಿಯನ್ನು ನೋಡಿದ ನಂತರ ಅಂಪೈರ್ ಮನಸ್ಸು ಬದಲಾಯಿಸಿದರು ಎಂದು ಹೇಳಿಕೊಳ್ಳುತ್ತ ಸೋಶಿಯಲ್ ಮೀಡಿಯಾದಲ್ಲಿ ಅಂಪೈರ್ ವರ್ತನೆಯನ್ನು ಟೀಕಿಸಿದ್ದಾರೆ.
#CSKvsMI #IPL2022 pic.twitter.com/MLzPnMpibH
— Subuhi S (@sportsgeek090) May 12, 2022
ಡಿಆರ್‌ಎಸ್ ಸೌಲಭ್ಯ ಸಿಗಲಿಲ್ಲ
ಈ ಘಟನೆ ಸಾಲದೆಂಬಂತೆ ಇದಕ್ಕೂ ಮೊದಲು ಈ ಪಂದ್ಯದಲ್ಲಿ ಇನ್ನೊಂದು ಘಟನೆ ಸಂಭವಿಸಿತು. ಇದರಿಂದ ಈಗ ಇಡೀ ಭಾರತೀಯ ಕ್ರಿಕೆಟ್ ತಲೆತಗ್ಗಿಸುವ ಸಂದರ್ಭ ಎದುರಾಗಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸಿಎಸ್‌ಕೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು ಎನ್ನುವ ಬದಲು ವಿಕೆಟ್ ಕಳೆದುಕೊಳ್ಳ ಬೇಕಾಯಿತು ಎನ್ನಬಹುದು. ಡೆವೊನ್ ಕಾನ್ವೆ ಮೊದಲ ಓವರ್‌ನಲ್ಲೇ ಎಲ್‌ಬಿಡಬ್ಲ್ಯೂ ಆದರು. ಅಂಪೈರ್ ಔಟ್ ಕೊಟ್ಟರು, ಡಿಆರ್‌ಎಸ್ ತೆಗೆದುಕೊಳ್ಳಲು ಬಯಸಿದರೂ ಸ್ಟೇಡಿಯಂನಲ್ಲಿ ಕರೆಂಟ್ ಇರಲಿಲ್ಲ. ವಿದ್ಯುತ್ ಇಲ್ಲದಿರುವುದು ಡಿಆರ್‌ಎಸ್ ಪಡೆಯಲು ಕಾನ್ವೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಇದರೊಂದಿಗೆ ಹತಾಶೆಯಿಂದ ಕಾನ್ವೆ ಪೆವಿಲಿಯನ್ನತ್ತ ಹೊರಡಬೇಕಾಯಿತು. ಆದರೆ ನಿಜಕ್ಕೂ ಇದು ಔಟ್ ಆಗಿತ್ತೆ ಎಂಬ ಅನುಮಾನ ಕಾಡಿದೆ. ಈ ಕುರಿತು ಅಭಿಮಾನಿಗಳು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
Published On - 3:54 pm, Fri, 13 May 22