ENG vs BAN: ಮಲಾನ್ ಶತಕ; ವಿಶ್ವಕಪ್​ನಲ್ಲಿ ಗೆಲುವಿನ ಖಾತೆ ತೆರೆದ ಆಂಗ್ಲರು

|

Updated on: Oct 11, 2023 | 6:48 AM

England vs Bangladesh, ICC ODI World Cup 2023: ವಿಶ್ವಕಪ್-2023 ರ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತನ್ನ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆಯನ್ನು ತೆರೆದಿದೆ. ಮಂಗಳವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು 137 ರನ್‌ಗಳಿಂದ ಸೋಲಿಸಿತು.

ENG vs BAN: ಮಲಾನ್ ಶತಕ; ವಿಶ್ವಕಪ್​ನಲ್ಲಿ ಗೆಲುವಿನ ಖಾತೆ ತೆರೆದ ಆಂಗ್ಲರು
ಇಂಗ್ಲೆಂಡ್- ಬಾಂಗ್ಲಾದೇಶ
Follow us on

ವಿಶ್ವಕಪ್-2023 ರ (ICC world cup 2023) ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತನ್ನ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆಯನ್ನು ತೆರೆದಿದೆ. ಮಂಗಳವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಬಾಂಗ್ಲಾದೇಶವನ್ನು (England vs Bangladesh)  137 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಡೇವಿಡ್ ಮಲಾನ್ (Dawid Malan) ಅವರ ಶತಕದ ನೆರವಿನಿಂದ ಐದು ವಿಕೆಟ್ ಕಳೆದುಕೊಂಡು 364 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ 48.2 ಓವರ್​ಗಳಲ್ಲಿ 227 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ಮೊದಲ ಸೋಲಾಗಿದ್ದು, ಇನ್ನು ಇದೇ ಮೈದಾನದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಗೆಲುವಿನ ಓಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಟ್ಲರ್ ಪಡೆ, ಬಾಂಗ್ಲಾ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು.

ಮಲಾನ್ ಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಡೇವಿಡ್ ಮಲಾನ್ ಅದ್ಭುತ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದರು. ಮಲಾನ್ ಹಾಗೂ ಮತ್ತೊಬ್ಬ ಆರಂಭಿಕ ಜಾನಿ ಬೈರ್‌ಸ್ಟೋವ್ ಶತಕದ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 115 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ 52 ರನ್ ಗಳಿಸಿ ಆಡುತ್ತಿದ್ದ ಬೈರ್‌ಸ್ಟೋವ್, ಶಕೀಬ್ ಅಲ್ ಹಸನ್‌ಗೆ ಬಲಿಯಾಗಿ ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬಂದ ಜೋ ರೂಟ್,  ಡೇವಿಡ್ ಮಲಾನ್ ಉತ್ತಮ ಸಾಥ್ ನೀಡಿದರು. ಹೀಗಾಗಿ ಇವರಿಬ್ಬರು ಸೇರಿ ತಂಡದ ಸ್ಕೋರನ್ನು 266 ರನ್​ಗಳಿಗೆ ಕೊಂಡೊಯ್ದರು. ಈ ವೇಳೆ ಮಲಾನ್ ಶತಕ ಸಿಡಿಸಿ ಮಿಂಚಿದರೆ, ಜೋ ರೂಟ್ ಶತಕ ವಂಚಿತರಾದರು. ಮಲಾನ್ ತಮ್ಮ ಇನ್ನಿಂಗ್ಸ್​ನಲ್ಲಿ  107 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 140 ರನ್ ಗಳಿಸಿ, ಮೆಹದಿ ಹಸನ್​ಗೆ ಬಲಿಯಾದರು. ಆದರೆ ಮಲಾನ್ ಬಳಿಕ ಬಂದ ನಾಯಕ ಜೋಸ್ ಬಟ್ಲರ್​ಗೆ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದೆ 20 ರನ್​ಗೆ ಬ್ಯಾಟ್ ಎತ್ತಿಟ್ಟರು.

ಇಂಗ್ಲೆಂಡ್​ಗೆ 3 ವಿಕೆಟ್​ಗಳ ರೋಚಕ ಜಯ: ಸರಣಿಯಲ್ಲಿ ಆಂಗ್ಲರು ಜೀವಂತ

ಶತಕ ವಂಚಿತ ರೂಟ್

ಮಲಾನ್ ಜೊತೆ ಶತಕದ ಜೊತೆಯಾಟವನ್ನಾಡಿದ ರೂಟ್ ಆರಂಭದಿಂದಲೂ ವೇಗವಾಗಿ ರನ್ ಗಳಿಸುತ್ತಿದ್ದರು. ಹೀಗಾಗಿ ಅವರು ಕೂಡ ಶತಕವನ್ನು ಪೂರ್ಣಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವೈಯಕ್ತಿಕ 82 ರನ್​ಗಳಿರುವಾಗ ರೂಟ್,  ಶೋರಿಫುಲ್ ಇಸ್ಲಾಂಗೆ ಬಲಿಯಾದರು. ರೂಟ್  ಕೇವಲ  68 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 82 ರನ್ ಕಲೆಹಾಕಿದರು. ಈ ಮೂವರ ಪ್ರಬಲ ಇನ್ನಿಂಗ್ಸ್​ನಿಂದಾಗಿ ಅಂತಿಮವಾಗಿ ಇಂಗ್ಲೆಂಡ್ ತಂಡ 350 ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಟೋಪ್ಲೆ ಎದುರು ಬಾಂಗ್ಲಾ ಫ್ಲಾಪ್

ಇಂಗ್ಲೆಂಡ್ ನೀಡಿದ ಈ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ತಂಡ 50 ರನ್ ಕಲೆಹಾಕುವುದರೊಳಗೆ ತಂಡದ ಪ್ರಮುಖ ನಾಲ್ವರು ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು. ಆದರೆ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಆಟಗಾರ ಲಿಟನ್ ದಾಸ್ 76 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ ಕೂಡ ಬಾರಿಸಿದರು. ಇವರನ್ನು ಹೊರತುಪಡಿಸಿ ಅನುಭವಿ ಮುಶ್ಫಿಕರ್ ರಹೀಮ್ 64 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 51 ರನ್ ಕಲೆಹಾಖಿದರು. ಈ ಇಬ್ಬರನ್ನು ಹೊರತುಪಡಿಸಿ ಮತ್ತ್ಯಾರಿಂದಲೂ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬರಲಿಲ್ಲ.  ರೀಸ್ ಟೋಪ್ಲೆ ದಾಳಿಗೆ ನಲುಗಿದ ಬಾಂಗ್ಲಾದೇಶ ಬ್ಯಾಟ್ಸ್‌ಮನ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇಂಗ್ಲೆಂಡ್ ಪರ  ರೀಸ್ ಟೋಪ್ಲೆ 10 ಓವರ್‌ ಬೌಲ್ ಮಾಡಿ  43 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:32 am, Wed, 11 October 23