ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು (ICC ODI World Cup) ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬೆಳಗ್ಗೆ 10:30ಕ್ಕೆ ಶುರುವಾಗಲಿರುವ ಮೊದಲ ಮ್ಯಾಚ್ನಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಲಿದೆ. ಮಧ್ಯಾಹ್ನ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯ ರೋಚಕತೆ ಸೃಷ್ಟಿಸಿದ್ದು, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಸೆಣೆಸಾಟ ನಡೆಸಲಿದೆ.
ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ಎರಡೂ ತಂಡಕ್ಕೆ ಇದೊಂದು ಔಪಚಾರಿಕ ಪಂದ್ಯವಷ್ಟೆ. ಆಸೀಸ್ ಈಗಾಗಲೇ ಸೆಮೀಸ್ಗೆ ಲಗ್ಗೆಯಿಟ್ಟಿದ್ದರೆ ಬಾಂಗ್ಲಾ ಟೂರ್ನಿಯಿಂದ ಔಟ್ ಆಗಿದೆ. ಹೀಗಾಗಿ ಈ ತಂಡದ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಕಮ್ಮಿನ್ಸ್ ಪಡೆ ಸೆಮಿ ಫೈನಲ್ಗು ಮುನ್ನ ಬೆಂಚ್ ಸ್ಟ್ರೆಂತ್ ಪರೀಕ್ಷೆ ನಡೆಸಬಹುದು. ಕಳೆದ ಪಂದ್ಯದಲ್ಲಿ ಅಬ್ಬರಿಸಿ ದ್ವಿಶತಕ ಸಿಡಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇತ್ತ ಬಾಂಗ್ಲಾ ಶಕೀಬ್ ಅಲ್ ಹಸನ್ ಸೇವೆ ಕಳೆದುಕೊಂಡಿದೆ. ಹೀಗಾಗಿ ತಂಡ ಕೊನೆಯ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತೆ ನೋಡಬೇಕು.
Rishabh Pant: ರಿಷಬ್ ಪಂತ್ ರೀ ಎಂಟ್ರಿ ಬಗ್ಗೆ ಖಚಿತ ಮಾಹಿತಿ ನೀಡಿದ ಸೌರವ್ ಗಂಗೂಲಿ..!
ಇಂಗ್ಲೆಂಡ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಾಗಿದೆ. ಪಾಕಿಸ್ತಾನಕ್ಕೆ ಸೆಮೀಸ್ ತಲುಪುವ ಅವಕಾಶ ಇರುವುದು ತೀರಾ ಕಡಿಮೆ, ಪವಾಡ ನಡೆಯಬೇಕಷ್ಟೆ. ಪಾಕಿಸ್ತಾನ ತಂಡವು ಮೊದಲು ಬೌಲಿಂಗ್ ಮಾಡಿದರೆ ಇಂಗ್ಲೆಂಡ್ ನೀಡುವ ಟಾರ್ಗೆಟ್ ಅನ್ನು ಕೇವಲ 2.4 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇದು ಅಸಾಧ್ಯ ಆಗಿರುವುದರಿಂದ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿದರೆ ಪಾಕ್ ಹೊರಬೀಳಲಿದೆ. ಇನ್ನು ಪಾಕಿಸ್ತಾನ ತಂಡವು ಮೊದಲು ಬ್ಯಾಟ್ ಮಾಡಿದರೆ 286 ಕ್ಕಿಂತ ಹೆಚ್ಚಿನ ರನ್ಗಳಿಸಲೇಬೇಕು. 300 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 13 ರನ್ಗಳಿಗೆ ಆಲೌಟ್ ಮಾಡಬೇಕು. 400 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 112 ರನ್ಗಳಿಗೆ ನಿಯಂತ್ರಿಸಬೇಕು. 450 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 162 ರನ್ಗಳಿಗೆ ನಿಯಂತ್ರಿಸಬೇಕು. ಹೀಗೆ ಪಾಕ್ಗೆ ಇಂದು ದೊಡ್ಡ ಸವಾಲಿದೆ.
ಈಡನ್ ಗಾರ್ಡನ್ಸ್ ದೊಡ್ಡ ಸ್ಕೋರ್ ಮಾಡುವ ಸ್ಥಳವೆಂದು ಪರಿಗಣಿಸದಿದ್ದರೂ, ಇಲ್ಲಿನ ಮೇಲ್ಮೈ ಬ್ಯಾಟಿಂಗ್‌ಗೆ ಸಹಕಾರಿ ಆಗಿದೆ. ಮೈದಾನವು ಬ್ಯಾಟ್ ಮತ್ತು ಬಾಲ್ ಎರಡಕ್ಕೂ ನೆರವಾಗುತ್ತದೆ ಎನ್ನಬಹುದು. ಏಕೆಂದರೆ ಸ್ಪಿನ್ನರ್‌ಗಳು ಈ ಪಿಚ್ನಲ್ಲಿ ಯಶಸ್ಸು ಸಾಧಿಸುತ್ತಾರೆ. ವೇಗಿಗಳು ಹೊಸ ಚೆಂಡಿನ ಮೂಲಕ ಪ್ರಭಾವ ಬೀರಬಹುದು. ಇಬ್ಬನಿಯು ಟಾರ್ಗೆಟ್ ಬೆನ್ನಟ್ಟುವ ತಂಡಕ್ಕೆ ಸಹಾಯ ಮಾಡಲಿದೆ. ಇಲ್ಲಿ ಒಟ್ಟು 38 ಏಕದಿನ ಪಂದ್ಯಗಳು ನಡೆದಿದೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 22 ಬಾರಿ ಗೆದ್ದರೆ, ಮೊದಲು ಬೌಲಿಂಗ್‌ನಲ್ಲಿ ಗೆದ್ದ ಪಂದ್ಯಗಳು 15. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 241 ಆಗಿದೆ.
ತಂಡಗಳು:
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹೇಝಲ್ವುಡ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್.
ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ, ತೌಹಿದ್ ಹೃದಯ್, ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್, ನಸುಮ್ ಅಹ್ಮದ್ ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋ, ಜೋ ರೂಟ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಡೇವಿಡ್ ವಿಲ್ಲಿ, ಸ್ಯಾಮ್ ಕರನ್.
ಪಾಕಿಸ್ತಾನ ತಂಡ: ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:13 am, Sat, 11 November 23