‘ರೋಹಿತ್ಗೆ ಟೀಂ ಇಂಡಿಯಾದ ನಾಯಕತ್ವವಹಿಸಿಕೊಳ್ಳಲು ಇಷ್ಟವಿರಲಿಲ್ಲ’; ಗಂಗೂಲಿ ಶಾಕಿಂಗ್ ಹೇಳಿಕೆ
sourav Ganguly: ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
2023ರ ವಿಶ್ವಕಪ್‌ನಲ್ಲಿ (ICC World Cup 2023) ಉತ್ತಮ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಅಜೇಯರಾಗಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ದೃಷ್ಟಿಕೋನದಿಂದ ನೋಡಿದರೆ, ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿ ಕಾಣುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ವಿಶ್ವಕಪ್‌ನಲ್ಲಿ ಒಂದೇ ಒಂದು ಸೋಲು ಕಾಣದೆ ಸೆಮಿಫೈನಲ್‌ಗೇರಿದ ಮೊದಲ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾ ಇದೇ ಭಾನುವಾರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ (India vs Netherlands) ತಂಡವನ್ನು ಎದುರಿಸಲಿದೆ. ಆದರೆ ಈ ನಡುವೆ ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಬಗ್ಗೆ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಸ್ಫೋಟಕ ಹೇಳಿಕೆಯೊಂದನ್ನು ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ನಾಯಕನಾಗಲು ರೋಹಿತ್ಗೆ ಇಷ್ಟವಿರಲಿಲ್ಲ
ವಾಸ್ತವವಾಗಿ ಟೀಂ ಇಂಡಿಯಾದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ರೋಹಿತ್ ಶರ್ಮಾಗೆ ತಂಡದ ನಾಯಕನ ಪಟ್ಟಕಟ್ಟಲಾಯಿತು. ರೋಹಿತ್ ಈ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೂ ಮುನ್ನವೇ, ಕೊಹ್ಲಿ ನಂತರ ತಂಡದ ನಾಯಕನಾಗಲು ಯಾರು ಅರ್ಹನೆಂಬ ಪ್ರಶ್ನೆಗೆ ಎಲ್ಲರೂ ರೋಹಿತ್ ಕಡೆ ಬೆರಳು ಮಾಡುತ್ತಿದ್ದರು. ಇದಕ್ಕೆ ಸೂಕ್ತವೆಂಬಂತೆ ರೋಹಿತ್ ಕೂಡ ಐಪಿಎಲ್ನಲ್ಲಾಗಲಿ ಅಥವಾ ಅವಕಾಶ ಸಿಕ್ಕಾಗ ಟೀಂ ಇಂಡಿಯಾದಲ್ಲಾಗಲಿ ನಾಯಕನಾಗಿ ಅದ್ಭುತ ಫಲಿತಾಂಶ ತಂದುಕೊಟ್ಟಿದ್ದರು. ಹೀಗಾಗಿ ಕೊಹ್ಲಿ ಬಳಿಕ ರೋಹಿತ್ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಟೀಂ ಇಂಡಿಯಾದ ನಾಯಕನಾಗಲು ರೋಹಿತ್ಗೆ ಇಷ್ಟವಿರಲಿಲ್ಲ ಎಂಬ ಶಾಕಿಂಗ್ ಹೇಳಿಕೆಯನ್ನು ಬಿಸಿಸಿಐ ಮಾಜಿ ಮುಖ್ಯಸ್ಥ ಸೌರವ್ ಗಂಗೂಲಿ ಹೊರಹಾಕಿದ್ದಾರೆ.
ಉತ್ತಮ ಆರಂಭದ ನಂತರ ಎಡವುತ್ತಿರುವ ರಾಹುಲ್; ರೋಹಿತ್ಗೆ ಹೊಸ ತಲೆನೋವು
ಆ ಬಳಿಕ ರೋಹಿತ್ ಒಪ್ಪಿಗೆ ಸೂಚಿಸಿದರು
ಕೋಲ್ಕತ್ತಾದ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಕುರಿತು ಮಾತನಾಡಿದ ಮಾಜಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ, ‘ರೋಹಿತ್ ಶರ್ಮಾಗೆ ಟೀಂ ಇಂಡಿಯಾದ ನಾಯಕನಾಗಲು ಇಷ್ಟವಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಅವರು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲೂ ಆಡುತ್ತಿದ್ದರು. ಹೀಗಾಗಿ ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳಲು ರೋಹಿತ್ಗೆ ಇಷ್ಟವಿರಲಿಲ್ಲ. ಆದರೆ ನಾನು ರೋಹಿತ್ ಅವರನ್ನು ಒಪ್ಪಿಸಿದೆ. ರೋಹಿತ್ ಬಳಿ ಈ ಬಗ್ಗೆ ಮಾತನಾಡಿದ ನಾನು ‘ರೋಹಿತ್ ನೀವೇ ಹೌದು ಎಂದು ಹೇಳಬೇಕು ಅಥವಾ ನಾನು ನಾಯಕನಾಗಿ ನಿಮ್ಮ ಹೆಸರನ್ನು ಘೋಷಿಸುತ್ತೇನೆ ಎಂದು ನಾನು ಅವರಿಗೆ ಹೇಳಿದೆ. ಆ ಬಳಿಕ ರೋಹಿತ್ ಒಪ್ಪಿಗೆ ಸೂಚಿಸಿದರು. ಈಗ ರೋಹಿತ್ ತಂಡವನ್ನು ಮುಂಚೂಣಿಯಿಂದ ಮುನ್ನಡೆಸುತ್ತಿರುವುದು ನನಗೆ ಖುಷಿ ತಂದಿದೆ ಎಂದಿದ್ದಾರೆ.
ನಾಯಕನಾಗಿ ರೋಹಿತ್ ದಾಖಲೆ
ನಾಯಕನಾಗಿ ರೋಹಿತ್ ಶರ್ಮಾ ಅವರ ದಾಖಲೆ ಅತ್ಯುತ್ತಮವಾಗಿದೆ. ಅದು ಐಪಿಎಲ್ ಆಗಿರಲಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ಆಗಿರಲಿ. ರೋಹಿತ್ ಎಲ್ಲೆಡೆ ತಮ್ಮ ನಾಯಕತ್ವದಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅವರ ನಾಯಕತ್ವದಲ್ಲಿ, ರೋಹಿತ್ ಮುಂಬೈ ತಂಡವನ್ನು 5 ಬಾರಿ (2013, 2015, 2017, 2019, 2020) ಐಪಿಎಲ್ ಚಾಂಪಿಯನ್ ಮಾಡಿದ್ದಾರೆ. ಇದಲ್ಲದೆ, ಅವರ ನಾಯಕತ್ವದಲ್ಲಿ ಭಾರತ ತಂಡ ಏಷ್ಯಾಕಪ್ ಗೆದ್ದು ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ ಒನ್ ಆಗಿದೆ.
ವಿಶ್ವಕಪ್‌ನಲ್ಲಿ ರೋಹಿತ್ ಪ್ರದರ್ಶನ
ನಾಯಕನಾಗಿ ರೋಹಿತ್ ಶರ್ಮಾ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದ್ದಾರೆ. ವಿಶ್ವಕಪ್‌ನಲ್ಲಿ ಇದುವರೆಗೆ ಆಡಿರುವ 8 ಇನ್ನಿಂಗ್ಸ್‌ಗಳಲ್ಲಿ ರೋಹಿತ್ 442 ರನ್ ಗಳಿಸಿದ್ದಾರೆ. ಅಲ್ಲದೆ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ನಂತರ ಭಾರತದ ಎರಡನೇ ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Fri, 10 November 23