ICC World Cup 2023: 2019ರ ವಿಶ್ವಕಪ್ನಂತೆ ನ್ಯೂಜಿಲೆಂಡ್‌ಗೆ ವರವಾಗುತ್ತಾ ಮಳೆ?
ICC World Cup 2023: ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಕನಸಿಗೆ ಅಡ್ಡಿಯನ್ನುಂಟು ಮಾಡುತ್ತಿರುವ ವರುಣ, 2019 ರ ವಿಶ್ವಕಪ್‌ನಲ್ಲಿ ವರವಾಗಿದ್ದ. ಹೀಗಾಗಿ ಈ ಬಾರಿಯೂ ಮಳೆಯಿಂದ ಪಂದ್ಯ ರದ್ದಾದರೆ, ನ್ಯೂಜಿಲೆಂಡ್ ತಂಡಕ್ಕೆ ಆಗುವ ಲಾಭವೇನು? ನಷ್ಟವೇನು? ಎಂಬುದರ ವಿವರ ಇಲ್ಲಿದೆ.
ವಿಶ್ವಕಪ್‌ನಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ (New Zealand vs Sri Lanka) ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹತ್ವದ ಪಂದ್ಯ ನಡೆಯಲಿದೆ. ಶ್ರೀಲಂಕಾ ತಂಡ ಈಗಾಗಲೇ ವಿಶ್ವಕಪ್ (ICC World Cup 2023) ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿರುವುದರಿಂದ ಈ ಪಂದ್ಯದ ಸೋಲು, ಗೆಲುವು ಲಂಕನ್ನರಿಗೆ ಹೆಚ್ಚು ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಆದರೆ ಈ ಪಂದ್ಯ ನ್ಯೂಜಿಲೆಂಡ್ ಪಾಲಿಗೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಸೆಮಿಫೈನಲ್ ರೇಸ್ನಲ್ಲಿ ಇನ್ನು ಜೀವಂತವಾಗಿರಬೇಕೆಂದರೆ ಈ ಪಂದ್ಯದ ಗೆಲುವು ಕಿವೀಸ್ ಪಡೆಗೆ ಅಗತ್ಯವಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಕೇನ್ ಪಡೆ ಸೋತರೆ, ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಹೀಗಾಗಿ ಈ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಇರಾದೆಯೊಂದಿಗೆ ನ್ಯೂಜಿಲೆಂಡ್ ತಂಡ ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಒಂದು ವೇಳೆ ಮಳೆ ಬಂದು ಪಂದ್ಯ ನಿಂತರೆ ಯಾವ ತಂಡಕ್ಕೆ ಹೆಚ್ಚು ಸಹಕಾರಿ? ಪಂದ್ಯ ರದ್ದಾದರೂ ಸಹ ನ್ಯೂಜಿಲೆಂಡ್ ತಂಡ ಸೆಮಿಸ್ಗೇರಲು ಇರುವ ಅವಕಾಶಗಳೇನು? ಎಂಬುದರ ವಿವರ ಇಲ್ಲಿದೆ.
ಈ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಮೊದಲ 4 ಪಂದ್ಯಗಳನ್ನು ಗೆದ್ದು ಅಮೋಘ ಶುಭಾರಂಭ ಮಾಡಿತ್ತು. ಆದರೆ ಕಳೆದ 4 ಪಂದ್ಯಗಳಲ್ಲಿ ಸೋಲನುಭವಿಸಿರುವ ಕಿವೀಸ್ಗೆ ಸೆಮಿಸ್ ಹಾದಿ ಕಠಿಣವೆನಿಸಿದೆ. ಪ್ರಸ್ತುತ ನ್ಯೂಜಿಲೆಂಡ್ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಈ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಕೇನ್ ಪಡೆ, ಶ್ರೀಲಂಕಾವನ್ನು ಸೋಲಿಸಲೇಬೇಕಾಗಿದೆ.
ನ್ಯೂಜಿಲೆಂಡ್ ಸೋತರೆ ಏನಾಗಬಹುದು?
ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಸೋತರೆ, ಕಿವೀ ತಂಡವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮುಂಬರುವ ಪಂದ್ಯಗಳಲ್ಲಿ ಸೋಲಲಿ ಎಂದು ಪ್ರಾರ್ಥಿಸಬೇಕಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮುಂಬರುವ ಪಂದ್ಯಗಳಲ್ಲಿ ಸೋತರೆ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸುವ ಭರವಸೆ ಜೀವಂತವಾಗಿರುತ್ತದೆ. ಇಲ್ಲಿಯವರೆಗೆ ಭಾರತವನ್ನು ಹೊರತುಪಡಿಸಿ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆವೆ. ನ್ಯೂಜಿಲೆಂಡ್ 8 ಪಂದ್ಯಗಳಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದಾಗ್ಯೂ, ನ್ಯೂಜಿಲೆಂಡ್ ಹೊರತುಪಡಿಸಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ 8 ಅಂಕಗಳನ್ನು ಹೊಂದಿವೆ. ಆದರೆ ಉತ್ತಮ ನೆಟ್ ರನ್ ರೇಟ್‌ನಿಂದ, ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.
NZ vs SL ICC World Cup 2023 Live Score: ಶ್ರೀಲಂಕಾದ 3ನೇ ವಿಕೆಟ್ ಪತನ
2019 ರಲ್ಲಿ ಕಿವೀಸ್ಗೆ ವರವಾಗಿದ್ದ ಮಳೆ
ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಕನಸಿಗೆ ಅಡ್ಡಿಯನ್ನುಂಟು ಮಾಡುತ್ತಿರುವ ವರುಣ, 2019 ರ ವಿಶ್ವಕಪ್‌ನಲ್ಲಿ ವರವಾಗಿದ್ದ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆದಿದ್ದ ಮಳೆ ಪೀಡಿತ ಸೆಮಿಫೈನಲ್ ಪಂದ್ಯವನ್ನು ಜುಲೈ 9 ಮತ್ತು 10ರಂದು ಎರಡು ದಿನಗಳ ಕಾಲ ನಡೆಸಲಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ಕೇವಲ 239 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ, ಮಳೆ ಕಾರಣ ಭಾರತದ ಇನಿಂಗ್ಸ್ ಅನ್ನು ಮರುದಿನಕ್ಕೆ ಮುಂದೂಡಲಾಯಿತು. ಇದು ಭಾರತದ ಸೋಲಿಗೆ ಕಾರಣವಾಯಿತು.
ಪಂದ್ಯದ ದಿನ ಮಳೆಯಾದ ಕಾರಣ ಭಾರತದ ಇನ್ನಿಂಗ್ಸ್ ಅನ್ನು ಮೀಸಲು ದಿನದಂಡು ಆಡಲಾಯಿತು. ಆದರೆ ಮಳೆಯಿಂದಾಗಿ ಪಿಚ್ ಸ್ವರೂಪದಲ್ಲಿ ಬದಲಾವಣೆಯಾಗಿ ಪಿಚ್ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿ ವರ್ತಿಸಿತು. ಇದರ ಲಾಭ ಪಡೆದ ಕಿವೀಸ್ ವೇಗಿಗಳ ಟೀಂ ಇಂಡಿಯಾದ 4 ವಿಕೆಟ್ಗಳನ್ನು 24 ರನ್‌ಗಳಿಗೆ ಉರುಳಿಸಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ನಡುವೆಯೂ ಭಾರತ ತಂಡ 49.3 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲ್‌ಔಟ್ ಆಗಿ 18 ರನ್‌ಗಳ ಸೋಲುಂಡು ವಿಶ್ವಕಪ್ ರೇಸ್‌ನಿಂದ ಹೊರಬಿದ್ದಿತ್ತು. ಒಂದು ವೇಳೆ ಪಂದ್ಯದ ದಿನವೇ ಭಾರತದ ಇನ್ನಿಂಗ್ಸ್ ಕೂಡ ನಡೆದಿದ್ದರೆ, ಇಲ್ಲಿ ಟೀಂ ಇಂಡಿಯಾ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು.
2023 ರ ವಿಶ್ವಕಪ್‌ನಲ್ಲಿ ಆ ಸಾಧ್ಯತೆಗಳಿಲ್ಲ!
ಆದರೆ ಈ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೆ ಮಳೆಯಿಂದ ಪಂದ್ಯ ರದ್ದಾದರೆ ಆಗುವ ಅನುಕೂಲಗಳಿಗಿಂತ ಅನಾನುಕೂಲಗಳೆ ಹೆಚ್ಚು. ಒಂದು ವೇಳೆ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ದೊರೆಯಲಿದೆ. ಇದರಿಂದ ಶ್ರೀಲಂಕಾಕ್ಕೆ 5 ಅಂಕ ಲಭಿಸಲಿದೆ. ಶ್ರೀಲಂಕಾ ಈಗಾಗಲೇ ವಿಶ್ವಕಪ್‌ನಿಂದ ಹೊರಬಿದ್ದಿರುವುದರಿಂದ ಅದಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಈ 1 ಅಂಕವು ನ್ಯೂಜಿಲೆಂಡ್‌ಗೆ ಬಹಳ ಮಹತ್ವದ್ದಾಗಿರಲಿದ್ದು, ಈ ಒಂದು ಅಂಕದಿಂದ ಕಿವೀಸ್ ಬಳಿ 9 ಅಂಕಗಳು ಇದ್ದಂತಾಗುತ್ತದೆ. ಒಂದು ವೇಳೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುಂಡರೆ, ಕಿವೀಸ್ ತಂಡ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಏಕೆಂದರೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ಬಳಿ ಇರುವುದು ಕೇವಲ 8 ಅಂಕ ಮಾತ್ರ. ಆದರೆ ಈ ಎರಡು ತಂಡಗಳಲ್ಲಿ ಒಂದು ತಂಡ ಗೆಲುವು ಸಾಧಿಸಿದರೆ, ನ್ಯೂಜಿಲೆಂಡ್ ತಂಡದ ಸೆಮಿಸ್ ಹಾದಿ ಮುಚ್ಚಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Thu, 9 November 23