ಪವಾಡ ನಡೆದ್ರೆ ಮಾತ್ರ ಪಾಕಿಸ್ತಾನ್ ಸೆಮಿಫೈನಲ್ಗೆ: ಇಲ್ಲಿದೆ ಲೆಕ್ಕಾಚಾರ
ICC World Cup 2023: ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡದ ನೆಟ್ ರನ್ ರೇಟ್ +0.743 ಇದೆ. ಆದರೆ ಪಾಕಿಸ್ತಾನ್ ತಂಡವು ಸದ್ಯ +0.036 ನೆಟ್ ರನ್ ರೇಟ್ ಅನ್ನು ಮಾತ್ರ ಹೊಂದಿದೆ. ಅಂದರೆ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನ್ ತಂಡವು ತನ್ನ ನೆಟ್ ರನ್ ರೇಟ್ ಅನ್ನು +0.744 ಕ್ಕೇರಿಸಬೇಕು.
ಏಕದಿನ ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಭಾರತ, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದೆ. ಇನ್ನು ಶ್ರೀಲಂಕಾ ವಿರುದ್ಧದ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ಕೂಡ ಸೆಮಿಫೈನಲ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಇತ್ತ ನ್ಯೂಝಿಲೆಂಡ್ ತಂಡವು ಭರ್ಜರಿ ಜಯ ಸಾಧಿಸುತ್ತಿದ್ದಂತೆ ಅತ್ತ ಪಾಕಿಸ್ತಾನ್ ತಂಡದ ಸೆಮಿಫೈನಲ್ ಕನಸು ಕಮರಿದೆ ಎನ್ನಬಹುದು. ಏಕೆಂದರೆ ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್ ಸೋತಿದ್ದರೆ ಮಾತ್ರ ಪಾಕ್ ತಂಡಕ್ಕೆ ಸೆಮಿಫೈನಲ್ಗೆ ಪ್ರವೇಶಿಸಲು ಉತ್ತಮ ಅವಕಾಶವಿತ್ತು.
ಆದರೀಗ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲೆಂಡ್ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇನ್ನು ಐದನೇ ಸ್ಥಾನದಲ್ಲಿರುವ ಪಾಕಿಸ್ತಾನ್ ತಂಡವು ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವಾಡಬೇಕಿದೆ. ಆದರೆ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ತನ್ನ ನೆಟ್ ರನ್ ರೇಟ್ ಅನ್ನು ಕೂಡ ಹೆಚ್ಚಿಸಿಕೊಳ್ಳಬೇಕಿದೆ.
ಪವಾಡ ನಡೆದರೆ ಪಾಕ್ ಸೆಮಿಫೈನಲ್ಗೆ:
ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡದ ನೆಟ್ ರನ್ ರೇಟ್ +0.743 ಇದೆ. ಆದರೆ ಪಾಕಿಸ್ತಾನ್ ತಂಡವು ಸದ್ಯ +0.036 ನೆಟ್ ರನ್ ರೇಟ್ ಅನ್ನು ಮಾತ್ರ ಹೊಂದಿದೆ. ಅಂದರೆ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನ್ ತಂಡವು ತನ್ನ ನೆಟ್ ರನ್ ರೇಟ್ ಅನ್ನು +0.744 ಕ್ಕೇರಿಸಬೇಕು. ಇದಕ್ಕಾಗಿ ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 300 ರನ್ಗಳನ್ನು ಕಲೆಹಾಕಬೇಕಾಗುತ್ತದೆ. ಹಾಗಿದ್ರೆ ಪಾಕ್ ತಂಡ ಸೆಮಿಫೈನಲ್ ಹಾದಿ ಹೇಗಿರಲಿದೆ ಎಂದು ನೋಡೋಣ…
- ಪಾಕಿಸ್ತಾನ್ ತಂಡವು ಮೊದಲು ಬೌಲಿಂಗ್ ಮಾಡಿದರೆ ಇಂಗ್ಲೆಂಡ್ ನೀಡುವ ಟಾರ್ಗೆಟ್ ಅನ್ನು ಕೇವಲ 2.4 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಅಂದರೆ 284 ಎಸೆತಗಳು ಬಾಕಿ ಇರುವಂತೆ ಪಾಕಿಸ್ತಾನ್ ತಂಡ ಚೇಸ್ ಮಾಡಿ ಗೆಲ್ಲಬೇಕು.
- ಇನ್ನು ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡಿದರೆ 286 ಕ್ಕಿಂತ ಹೆಚ್ಚಿನ ರನ್ಗಳಿಸಲೇಬೇಕು. ಒಂದು ವೇಳೆ 287 ಕ್ಕಿಂತ ಕಡಿಮೆ ರನ್ಗಳಿಸಿದರೆ ಅಧಿಕೃತವಾಗಿ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ.
ಒಂದು ವೇಳೆ ಪಾಕ್ ತಂಡವು 300 ರನ್ಗಳಿಸಿದರೆ ಇಂಗ್ಲೆಂಡ್ ತಂಡವನ್ನು ಎಷ್ಟು ರನ್ಗಳ ಒಳಗೆ ಆಲೌಟ್ ಅಥವಾ ನಿಯಂತ್ರಿಸಬೇಕು ಎಂಬುದರ ಲೆಕ್ಕಾಚಾರ ಈ ಕೆಳಗಿನಂತಿದೆ.
- ಪಾಕಿಸ್ತಾನ್ ತಂಡ 300 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 13 ರನ್ಗಳಿಗೆ ಆಲೌಟ್ ಮಾಡಬೇಕು.
- ಪಾಕಿಸ್ತಾನ್ ತಂಡ 400 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 112 ರನ್ಗಳಿಗೆ ನಿಯಂತ್ರಿಸಬೇಕು.
- ಪಾಕಿಸ್ತಾನ್ ತಂಡ 450 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 162 ರನ್ಗಳಿಗೆ ನಿಯಂತ್ರಿಸಬೇಕು.
- ಪಾಕಿಸ್ತಾನ್ ತಂಡ 500 ರನ್ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 211 ರನ್ಗಳಿಗೆ ನಿಯಂತ್ರಿಸಬೇಕು.
ಇದನ್ನೂ ಓದಿ: ಭರ್ಜರಿ ಸೆಂಚುರಿಯೊಂದಿಗೆ ಕಿಂಗ್ ಕೊಹ್ಲಿಯ ದಾಖಲೆ ಮುರಿದ ಇಬ್ರಾಹಿಂ ಝದ್ರಾನ್
ಅಂದರೆ ಮೊದಲು ಬ್ಯಾಟ್ ಮಾಡಿದ್ರೆ ಬೃಹತ್ ಮೊತ್ತ ಪೇರಿಸಿ 287 ರನ್ಗಳ ಅಂತರದ ಗೆಲುವು ದಾಖಲಿಸಬೇಕು. ಇನ್ನು ದ್ವಿತೀಯ ಇನಿಂಗ್ಸ್ ಆಡಿದ್ರೆ 16 ಎಸೆತಗಳಲ್ಲಿ ಇಂಗ್ಲೆಂಡ್ ನೀಡುವ ಗುರಿಯನ್ನು ಚೇಸ್ ಮಾಡಬೇಕು. ಇಲ್ಲದಿದ್ದರೆ ಪಾಕಿಸ್ತಾನ್ ತಂಡ ವಿಶ್ವಕಪ್ ಸೆಮಿಫೈನಲ್ನಿಂದ ಹೊರಬೀಳಲಿದೆ. ಈ ಲೆಕ್ಕಾಚಾರದಂತೆ ಪಾಕ್ ಸೆಮಿಫೈನಲ್ಗೇರಲು ಪವಾಡವೇ ನಡೆಯಬೇಕು. ಹೀಗಾಗಿಯೇ ಸೆಮಿಫೈನಲ್ ರೇಸ್ನಿಂದ ಪಾಕ್ ಹೊರಬಿದ್ದಿದೆ ಎನ್ನಬಹುದು. ಅದರಂತೆ ಸೆಮಿಫೈನಲ್ನಲ್ಲಿ ಭಾರತದ ಎದುರಾಳಿಯಾಗಿ ನ್ಯೂಝಿಲೆಂಡ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾಗೆಯೇ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
Published On - 8:53 pm, Thu, 9 November 23