‘ಎಲ್ಲರ ಬಳಿಯೂ ನನ್ನ ನಂಬರ್ ಇದೆ’; ಪತ್ರಿಕಾಗೋಷ್ಠಿಯಲ್ಲಿ ಮಾಜಿ ಆಟಗಾರರ ವಿರುದ್ಧ ಸಿಟ್ಟಾದ ಬಾಬರ್..!
Babar Azam, ICC World Cup 2023: ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಬಾಬರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ನಾಯಕನಾಗಿಯೂ ಅವರು ತಂಡವನ್ನು ಹೆಚ್ಚು ಯಶಸ್ವಿಯಾಗಿ ಮುನ್ನಡೆಸಲಿಲ್ಲ. ಇನ್ನು ಆಟಗಾರನಾಗಿ ಬಾಬರ್ ಆಡಿರುವ ಎಂಟು ಇನ್ನಿಂಗ್ಸ್‌ಗಳಲ್ಲಿ 282 ರನ್ ಗಳಿಸಿದ್ದಾರೆ. ಅಲ್ಲದೆ ಅವರ ಕಳಪೆ ಸ್ಟ್ರೈಕ್ ರೇಟ್ ಅಭಿಮಾನಿಗಳು ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ
ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗಳಿಗೆ ಒಳಗಾಗಿರುವ ತಂಡದ ನಾಯಕ ಬಾಬರ್ ಆಝಂ (Babar Azam) ಪತ್ರಿಕಾಗೋಷ್ಠಿಯಲ್ಲಿ ಗರಂ ಆಗಿದ್ದಾರೆ. ವಿಶ್ವಕಪ್‌ನಲ್ಲಿ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿರುವ ಪಾಕಿಸ್ತಾನ, ಇಂಗ್ಲೆಂಡ್ (England vs Pakistan) ವಿರುದ್ಧ ತನ್ನ ಕೊನೆಯ ಲೀಗ್ ಹಂತದ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯವನ್ನು ಕನಿಷ್ಠ 287 ರನ್‌ಗಳಿಂದ ಗೆದ್ದರೆ ಮಾತ್ರ ಪಾಕ್ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸೆಮಿಫೈನಲ್ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದು, ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಬಾಬರ್, ತಂಡದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರರು ಎತ್ತಿರುವ ಪ್ರಶ್ನೆಗೆ ಖಾರವಾಗಿಯೇ ಉತ್ತರಿಸಿದರು.
ಮಾಜಿ ಆಟಗಾರರ ಮೇಲೆ ಬಾಬರ್ ಗರಂ
ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಬಾಬರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ನಾಯಕನಾಗಿಯೂ ಅವರು ತಂಡವನ್ನು ಹೆಚ್ಚು ಯಶಸ್ವಿಯಾಗಿ ಮುನ್ನಡೆಸಲಿಲ್ಲ. ಇನ್ನು ಆಟಗಾರನಾಗಿ ಬಾಬರ್ ಆಡಿರುವ ಎಂಟು ಇನ್ನಿಂಗ್ಸ್‌ಗಳಲ್ಲಿ 282 ರನ್ ಗಳಿಸಿದ್ದಾರೆ. ಅಲ್ಲದೆ ಅವರ ಕಳಪೆ ಸ್ಟ್ರೈಕ್ ರೇಟ್ ಅಭಿಮಾನಿಗಳು ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಹೀಗಾಗಿ ಪಾಕ್ ತಂಡದ ಮಾಜಿ ಆಟಗಾರರು ಬಾಬರ್ ನಾಯಕತ್ವವವನ್ನು ಹಾಗೂ ಅವರ ಆಟವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್, ತನ್ನ ಟೀಕಾಕಾರರ ಬಾಯಿ ಮುಚ್ಚಿಸುವ ಕೆಲಸ ಮಾಡಿದರು.
AUS vs PAK: ಪಾಕ್ ತಂಡದ ಸೋಲಿಗೆ ನಾಯಕ ಬಾಬರ್ ದೂರಿದ್ದು ಯಾರನ್ನು ಗೊತ್ತಾ?
ಅಭಿಪ್ರಾಯಗಳನ್ನು ನೀಡುವುದು ತುಂಬಾ ಸುಲಭ
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಆಟಗಾರರ ವಿರುದ್ಧ ಹರಿಹಾಯ್ದ ಬಾಬರ್, ಟಿವಿಯಲ್ಲಿ ಕುಳಿತು ಅಭಿಪ್ರಾಯಗಳನ್ನು ನೀಡುವುದು ತುಂಬಾ ಸುಲಭ. ನನ್ನ ಫೋನ್ ನಂಬರ್ ಎಲ್ಲರ ಬಳಿಯೂ ಇದೆ. ಹೀಗಾಗಿ ಯಾರಾದರೂ ಸಲಹೆ ನೀಡಲು ಬಯಸಿದರೆ, ನನಗೆ ನೇರವಾಗಿ ಕರೆ ಮಾಡಿ ಎಂದಿದ್ದಾರೆ. ಈ ಹೇಳಿಕೆಯೊಂದಿಗೆ, ಬಾಬರ್ ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನಿ ಸುದ್ದಿ ವಾಹಿನಿಗಳಲ್ಲಿ ಬಾಬರ್ ಅವರನ್ನು ಟೀಕಿಸಿದ ಮಾಜಿ ಆಟಗಾರರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ನಾಯಕತ್ವದ ಒತ್ತಡವನ್ನು ಅನುಭವಿಸುತ್ತಿಲ್ಲ
ವಾಸ್ತವವಾಗಿ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ 270 ಕ್ಕೂ ಹೆಚ್ಚು ರನ್ ಕಲೆಹಾಕಿದ ಹೊರತಾಗಿಯೂ ಪಾಕ್ ತಂಡ ಸೋಲನುಭವಿಸಿತ್ತು. ಹೀಗಾಗಿ ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ಬಾಬರ್ ಅವರ ನಾಯಕತ್ವವನ್ನು ನಿರಂತರವಾಗಿ ಪ್ರಶ್ನೆ ಮಾಡಲಾಗುತ್ತಿದೆ. ಮಾಜಿ ಆಟಗಾರರಾದ ಶೋಯೆಬ್ ಮಲಿಕ್ ಮತ್ತು ಮೊಯಿನ್ ಖಾನ್ ನಾಯಕತ್ವದ ಒತ್ತಡದಿಂದಾಗಿ ಬಾಬರ್ ಅವರ ಫಾರ್ಮ್ ಕುಸಿತ ಕಾಣುತ್ತಿದೆ ಎಂದಿದ್ದರು. ಆದರೆ ಈ ಬಗ್ಗೆ ಮಾತನಾಡಿದ ಬಾಬರ್, ನಾನು ಯಾವುದೇ ನಾಯಕತ್ವದ ಒತ್ತಡವನ್ನು ಅನುಭವಿಸುತ್ತಿಲ್ಲ. ಅಲ್ಲದೆ ಒತ್ತಡ, ಮೈದಾನದಲ್ಲಿ ನನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ತನ್ನ ಆಟದ ಬಗ್ಗೆ ಬಾಬರ್ ಹೇಳಿದಿದು
‘ಕಳೆದ ಮೂರು ವರ್ಷಗಳಿಂದ ನಾನು ನನ್ನ ತಂಡದ ನಾಯಕನಾಗಿದ್ದೇನೆ. ನಾನು ಒತ್ತಡದಲ್ಲಿದ್ದೇನೆ ಎಂದು ನನಗೆ ಎಂದೂ ಅನಿಸಿಲ್ಲ. ವಿಶ್ವಕಪ್‌ನಲ್ಲಿ ನಾನು ಮಾಡಬೇಕಾದ ಪ್ರದರ್ಶನ ನೀಡಲಿಲ್ಲ ಎಂಬ ಕಾರಣಕ್ಕಾಗಿ ಜನರು ಒತ್ತಡದಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ಕಾರಣದಿಂದಾಗಿ ನಾನು ಯಾವುದೇ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಭಾವಿಸುವುದಿಲ್ಲ ಫೀಲ್ಡಿಂಗ್ ಮಾಡುವಾಗ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಬ್ಯಾಟಿಂಗ್ ಮಾಡುವಾಗ, ನಾನು ಹೇಗೆ ರನ್ ಗಳಿಸಬೇಕು ಮತ್ತು ತಂಡದ ಗೆಲುವಿಗೆ ಹೇಗೆ ಸಹಾಯ ಮಾಡಬೇಕೆಂದು ಯೋಚಿಸುತ್ತೇನೆ ಎಂದು ಬಾಬರ್ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ