ಭಾರತ- ಆಸೀಸ್ ಕೊನೆಯ ಟಿ20 ಹೈದರಾಬಾದ್ನಿಂದ ಬೆಂಗಳೂರಿಗೆ ಶಿಫ್ಟ್! ಕಾರಣವೇನು ಗೊತ್ತಾ?
IND vs AUS, T20 Series: ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರ ಸರಣಿಯ ಕೊನೆಯ ಟಿ20 ಪಂದ್ಯವು ಡಿಸೆಂಬರ್ 3 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಇದೀಗ ಆ ಪಂದ್ಯಕ್ಕೆ ಹೈದರಾಬಾದ್‌ನಲ್ಲಿ ಆತಿಥ್ಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನೂತನ ಪದಾಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಸರಣಿಯ ನಾಲ್ಕನೇ ಪಂದ್ಯವು ನಾಗ್ಪುರದಲ್ಲಿ ನಡೆಯುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.
ಪ್ರಸ್ತುತ ಭಾರತದಲ್ಲಿ ಏಕದಿನ ವಿಶ್ವಕಪ್ (ICC ODI World Cup 2023) ನಡೆಯುತ್ತಿದ್ದು, ಈ ಮಹಾ ಸಂಗ್ರಾಮಕ್ಕೆ ನವೆಂಬರ್ 19 ರಂದು ತೆರೆ ಬೀಳಲಿದೆ. ಆ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ದ್ವಿಪಕ್ಷೀಯ ಸರಣಿ ನಡೆಯಲ್ಲಿದೆ. ಈ ಸರಣಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಇದಕ್ಕಾಗಿ ಆಸ್ಟ್ರೇಲಿಯಾ ತಂಡವನ್ನು ಸಹ ಪ್ರಕಟಿಸಿಲಾಗಿದೆ. ಆದರೆ ಈ ನಡುವೆ ಐದು ಪಂದ್ಯಗಳ ಟಿ20ಸರಣಿಯ (T20 Series) ಕೊನೆಯ ಎರಡು ಪಂದ್ಯಗಳ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರ ಸರಣಿಯ ಕೊನೆಯ ಟಿ20 ಪಂದ್ಯವು ಡಿಸೆಂಬರ್ 3 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಇದೀಗ ಆ ಪಂದ್ಯಕ್ಕೆ ಹೈದರಾಬಾದ್‌ನಲ್ಲಿ ಆತಿಥ್ಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನೂತನ ಪದಾಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಸರಣಿಯ ನಾಲ್ಕನೇ ಪಂದ್ಯವು ನಾಗ್ಪುರದಲ್ಲಿ ನಡೆಯುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ
ವಾಸ್ತವವಾಗಿ ಕೊನೆಯ ಟಿ20 ಪಂದ್ಯದ ಸ್ಥಳ ಬದಲಾವಣೆಯಾಗಲು ಕಾರಣವೂ ಇದೆ. ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನ ಸರಣಿಯ 5ನೇ ಪಂದ್ಯ ನಡೆಯಲಿದೆ. ಒಂದೇ ದಿನ ಎರಡು ಪ್ರಮುಖ ಘಟನೆಗಳಿಗೆ ಸ್ಥಳೀಯ ಪೊಲೀಸರು ಭದ್ರತೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಪಂದ್ಯ ಆಡದಿರಲು ನಿರ್ಧರಿಸಲಾಗಿದೆ. ಇನ್ನೊಂದೆಡೆ ವಿದರ್ಭ ಕ್ರಿಕೆಟ್ ಸಂಸ್ಥೆ ನಾಗ್ಪುರ ಸ್ಟೇಡಿಯಂ ಕಾಮಗಾರಿ ಆರಂಭಿಸಿದ್ದು, ಈ ಮೈದಾನದಲ್ಲಿ ಪಂದ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಬೆಂಗಳೂರಲ್ಲಿ ಕೊನೆಯ ಟಿ20?
ಟಿ20 ಸರಣಿಯ ನಾಲ್ಕು ಮತ್ತು ಐದನೇ ಪಂದ್ಯಗಳ ಸ್ಥಳ ಇನ್ನೂ ನಿರ್ಧಾರವಾಗಿಲ್ಲ. ಆದರೆ ಕ್ರಿಕ್‌ಬಜ್ ವರದಿ ಮಾಡಿದಂತೆ, ಕೊನೆಯ ಟಿ20 ಪಂದ್ಯಕ್ಕೆ ಬೆಂಗಳೂರು ಮತ್ತು ನಾಲ್ಕನೇ ಪಂದ್ಯಕ್ಕೆ ರಾಯಪುರವನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕ್ರಿಕ್‌ಬಜ್ ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿ ಸುದ್ದಿಯನ್ನು ಖಚಿತಪಡಿಸಿದೆ.
ಸರಣಿ ವೇಳಾಪಟ್ಟಿ
ವಿಶ್ವಕಪ್‌ನ ಫೈನಲ್ ಮುಗಿದ ನಾಲ್ಕು ದಿನಗಳ ನಂತರ ಸರಣಿ ಆರಂಭವಾಗಲಿದೆ. ಮೊದಲ ಟಿ20 ಪಂದ್ಯ ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ತಿರುವನಂತಪುರಂನಲ್ಲಿ 26 ರಂದು ಮತ್ತು ಮೂರನೇ ಪಂದ್ಯ ಗೌಹಾಟಿಯಲ್ಲಿ ನವೆಂಬರ್ 28 ರಂದು ನಡೆಯಲಿದೆ. ನಾಲ್ಕನೇ ಪಂದ್ಯ ಡಿಸೆಂಬರ್ 1 ರಂದು ಮತ್ತು ಐದನೇ ಪಂದ್ಯ ಡಿಸೆಂಬರ್ 3 ರಂದು ನಡೆಯಲಿದೆ.
ಟೀಂ ಇಂಡಿಯಾ ಪ್ರಕಟವಾಗಿಲ್ಲ
ಈ ಸರಣಿಗೆ ಭಾರತ ತಂಡ ಇನ್ನೂ ಪ್ರಕಟವಾಗಿಲ್ಲ. ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವ ಕಾರಣ, ಸೂರ್ಯಕುಮಾರ್ ಯಾದವ್ ಅಥವಾ ರುತುರಾಜ್ ಗಾಯಕ್ವಾಡ್ ಅವರಿಗೆ ಟೀಂ ಇಂಡಿಯಾ ನಾಯಕತ್ವವನ್ನು ನೀಡುವ ಸಾಧ್ಯತೆಗಳಿವೆ.
ಆಸ್ಟ್ರೇಲಿಯಾ ತಂಡ: ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ