IND vs ENG: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದ ಇಂಗ್ಲೆಂಡ್

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಒಂದು ದಿನ ಮೊದಲು, ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ಈ ತಂಡದಲ್ಲಿ ಅನುಭವಿ ಜೋ ರೂಟ್‌ಗೆ ಸ್ಥಾನ ನೀಡಿದ್ದು, ಬರೋಬ್ಬರಿ 453 ದಿನಗಳ ನಂತರ ರೂಟ್ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

IND vs ENG: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದ ಇಂಗ್ಲೆಂಡ್
ಇಂಗ್ಲೆಂಡ್ ತಂಡ

Updated on: Feb 05, 2025 | 5:55 PM

ಐದು ಪಂದ್ಯಗಳ ಟಿ20 ಸರಣಿಯನ್ನು ಯಶಸ್ವಿಯಾಗಿ ಆಡಿ ಮುಗಿಸಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಇದೀಗ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿವೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಯಾರಿಯ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳ ಬಹಳ ಮುಖ್ಯವಾಗಿದ್ದು, ಎರಡೂ ತಂಡಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಉಭಯ ತಂಡಗಳ ಮೊದಲ ಏಕದಿನ ಪಂದ್ಯ ನಾಳೆ ಅಂದರೆ ಫೆಬ್ರವರಿ 6 ರಂದು ನಾಗ್ಪುರದಲ್ಲಿ ನಡೆಯಲಿದೆ. ಹೀಗಾಗಿ ಈ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.

ಜೋ ರೂಟ್​ಗೆ ಸ್ಥಾನ

ಸಂಪ್ರದಾಯದಂತೆ ಪಂದ್ಯ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇರುವಂತೆಯೇ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಈ ತಂಡದಲ್ಲ್ಲಿ ಒಂದು ಅಚ್ಚರಿಯ ಹೆಸರು ಸೇರ್ಪಡೆಗೊಂಡಿದೆ. ವಾಸ್ತವವಾಗಿ, ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಜೋ ರೂಟ್ ಬರೋಬ್ಬರಿ 452 ದಿನಗಳ ನಂತರ ಏಕದಿನ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಜೋ ರೂಟ್ ಕೊನೆಯ ಬಾರಿಗೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಏಕದಿನ ಪಂದ್ಯವನ್ನು ಆಡಿದ್ದರು. ಆ ಬಳಿಕ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು.

ಆದಾಗ್ಯೂ ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ತಂಡಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಲಾಗಿದೆ. ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಜೋ ರೂಟ್ ಬಹಳ ದಿನಗಳ ನಂತರ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲದೆ, ಜಾಕೋಬ್ ಬೆಥೆಲ್ ಕೂಡ ತಂಡದ ಭಾಗವಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಸಾಕಿಬ್ ಮಹಮೂದ್ ಸ್ಥಾನ ಪಡೆದಿದ್ದು, ಆದಿಲ್ ರಶೀದ್ ಸ್ಪಿನ್ನರ್ ಆಗಿ ತಂಡದಲ್ಲಿದ್ದಾರೆ.

ಇಂಗ್ಲೆಂಡ್‌ನ ಪ್ಲೇಯಿಂಗ್ 11: ಬೆನ್ ಡಕೆಟ್, ಫಿಲ್ ಸಾಲ್ಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಸಾಕಿಬ್ ಮಹಮೂದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Wed, 5 February 25