IND vs ENG: ಕ್ರೀಡಾಂಗಣದ ಹೊರಗೆ ಕಾಲ್ತುಳಿತ; ಪೊಲೀಸರಿಂದ ಲಾಠಿ ಚಾರ್ಜ್, ಜಲಫಿರಂಗಿ ಪ್ರಯೋಗ
India vs England ODI: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದ ಟಿಕೆಟ್ ಮಾರಾಟದ ಸಂದರ್ಭದಲ್ಲಿ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದೆ. ಹಲವಾರು ಅಭಿಮಾನಿಗಳು ಗಾಯಗೊಂಡಿದ್ದು, ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಆ ಬಳಿಕ ಸರಣಿಯ ಎರಡನೇ ಪಂದ್ಯವು ಫೆಬ್ರವರಿ 9 ರಂದು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಆಫ್‌ಲೈನ್ ಟಿಕೆಟ್‌ಗಳ ಮಾರಾಟ ಇಂದಿನಿಂದ ಪ್ರಾರಂಭವಾಗಿದೆ. ಆದರೆ ಟಿಕೆಟ್ ಖರೀದಿಸುವ ಸಮಯದಲ್ಲಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿದ್ದು, ಇದರಲ್ಲಿ ಅನೇಕ ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಾರತ-ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಕಾಲ್ತುಳಿತ!
ವಾಸ್ತವವಾಗಿ, ಎರಡನೇ ಏಕದಿನ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಲು ಸಾಕಷ್ಟು ಕ್ರಿಕೆಟ್ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ಕೆಲವು ಅಭಿಮಾನಿಗಳು ಟಿಕೆಟ್‌ಗಾಗಿ ಕೌಂಟರ್ ಹತ್ತಲು ಪ್ರಾರಂಭಿಸಿದರು, ಇದರಿಂದಾಗಿ ಪೊಲೀಸರನ್ನು ಕರೆಯಬೇಕಾಯಿತು. ಇದರಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮಾಧ್ಯಮ ವರದಿಗಳ ಪ್ರಕಾರ, ಭಾರಿ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.
ವರದಿಗಳ ಪ್ರಕಾರ, ಈ ಕಾಲ್ತುಳಿತದಲ್ಲಿ ಸುಮಾರು 10 ಜನರು ಅಸ್ವಸ್ಥರಾಗಿದ್ದು, 15 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಒಡಿಶಾ ಕ್ರಿಕೆಟ್ ಅಸೋಸಿಯೇಷನ್ (ಒಸಿಎ) ಕೂಡ ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಮತ್ತೊಂದೆಡೆ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಟಿಕೆಟ್ ಖರೀದಿಸಲು ಬಂದ ಜನರು ಆರೋಪಿಸಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಜನರು ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಬುಧವಾರ ಬೆಳಿಗ್ಗೆ ಪರಿಸ್ಥಿತಿ ಕೈಮೀರಿ ಈ ಅವಘಡ ಸಂಭವಿಸಿದೆ. ಬಾರಾಬಾತಿ ಕ್ರೀಡಾಂಗಣದ ಆಸನ ಸಾಮರ್ಥ್ಯ 44,574 ಆಗಿದ್ದು, ಇದರಲ್ಲಿ 24,692 ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಿವೆ.
3 ವರ್ಷಗಳ ನಂತರ ಕಟಕ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯ
ಹಲವು ವರ್ಷಗಳ ನಂತರ ಕಟಕ್‌ನಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಾಗುತ್ತಿದೆ. ಬಾರಾಬಾತಿ ಕ್ರೀಡಾಂಗಣದಲ್ಲಿ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆದಿತ್ತು. ಇದರ ಜೊತೆಗೆ, ಐದು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಾರಾಬಾತಿ ಕ್ರೀಡಾಂಗಣದಲ್ಲಿ ಆಡುತ್ತಿರುವುದು ಇದೇ ಮೊದಲು. ಈ ಇಬ್ಬರು ಸ್ಟಾರ್ ಆಟಗಾರರು ಕೊನೆಯ ಬಾರಿಗೆ 2019 ರಲ್ಲಿ ಕಟಕ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಹೀಗಾಗಿ ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಸಲುವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಟಿಕೆಟ್ ಖರೀದಿಸಲು ಕ್ರೀಡಾಂಗಣಕ್ಕೆ ಬಂದಿದ್ದಾರೆ. ಆ ವೇಳೆ ಈ ಅವಘಡ ಸಂಭವಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Wed, 5 February 25