RCB: ಲೀಗ್ ಆರಂಭಕ್ಕೂ ಮುನ್ನವೇ ಆರ್​ಸಿಬಿ ಜೆರ್ಸಿಯಲ್ಲಿ ಬದಲಾವಣೆ; ಪೋಟೋ ನೋಡಿ

RCB Women's Jersey: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. 2025ರ ಮಹಿಳಾ ಪ್ರೀಮಿಯರ್ ಲೀಗ್‌ಗೂ ಮುನ್ನ, ಕೆಂಪು ಮತ್ತು ಕಡುನೀಲಿ ಬಣ್ಣ ಮಿಶ್ರಿತ ತರಬೇತಿ ಜೆರ್ಸಿಯನ್ನು ಆರ್​ಸಿಬಿ ಬಿಡುಗಡೆ ಮಾಡಿದೆ. ಅಭ್ಯಾಸ ಜೆರ್ಸಿ ಮಾತ್ರವಲ್ಲದೆ ಆಡದ ಜೆರ್ಸಿಯಲ್ಲೂ ಬದಲಾವಣೆ ಮಾಡಲಾಗಿದೆ.

RCB: ಲೀಗ್ ಆರಂಭಕ್ಕೂ ಮುನ್ನವೇ ಆರ್​ಸಿಬಿ ಜೆರ್ಸಿಯಲ್ಲಿ ಬದಲಾವಣೆ; ಪೋಟೋ ನೋಡಿ
ಆರ್​ಸಿಬಿ ಮಹಿಳಾ ತಂಡ
Follow us
ಪೃಥ್ವಿಶಂಕರ
|

Updated on: Feb 05, 2025 | 7:42 PM

2025 ರ ಐಪಿಎಲ್​ ಆರಂಭಕ್ಕೆ ಇನ್ನೂ ಸುಮಾರು ಒಂದೂವರೆ ತಿಂಗಳು ಬಾಕಿ ಇದೆ. ಆದರೆ ಈ ಮಿಲಿಯನ್ ಡಾಲರ್ ಟೂರ್ನಿಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ನಡೆಯಲಿದೆ. ಐದು ಮಹಿಳಾ ತಂಡಗಳ ನಡುವೆ ನಡೆಯಲ್ಲಿರುವ ಡಬ್ಲ್ಯುಪಿಎಲ್​ನ ಮೂರನೇ ಸೀಸನ್ ಫೆಬ್ರವರಿ 14 ರಿಂದ ಆರಂಭವಾಗಲಿದೆ. ಆದರೆ ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡದ ಜೆರ್ಸಿಯಲ್ಲಿ ಬದಲಾವಣೆಯಾಗಿದೆ. ಬದಲಾಗಿರುವ ನೂತನ ಜೆರ್ಸಿಯನ್ನು ತೊಟ್ಟು ತಂಡದ ಆಟಗಾರ್ತಿಯರು ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ತರಬೇತಿ ಜೆರ್ಸಿಯಲ್ಲಿ ಬದಲಾವಣೆ

ವಾಸ್ತವವಾಗಿ ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿಯರ ತರಬೇತಿ ಜೆರ್ಸಿಯಲ್ಲಿ ಬದಲಾವಣೆ ಮಾಡಲಾಗಿದೆ. ಅವರ ಅಭ್ಯಾಸ ಜೆರ್ಸಿ ಈಗ ಮೊದಲಿಗಿಂತ ಭಿನ್ನವಾಗಿ ಕಾಣುತ್ತದೆ. ಆರ್​ಸಿಬಿ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ತಂಡದ ಆಟಗಾರ್ತಿಯರು ಹೊಸದಾಗಿ ವಿನ್ಯಾಸ ಮಾಡಿರುವ ಜೆರ್ಸಿಯನ್ನು ತೊಟ್ಟು ಮೈದಾನದಲ್ಲಿ ಅಭ್ಯಾಸ ಮಾಡಿದ್ದಾರೆ.

ಆರ್‌ಸಿಬಿ ನಾಯಕತ್ವ ಸ್ಮೃತಿ ಕೈಯಲ್ಲಿ

ಕಳೆದೆರಡು ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಆರ್​ಸಿಬಿ ಮಹಿಳಾ ತಂಡವನ್ನು ಟೀಂ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಮುನ್ನಡೆಸಲಿದ್ದಾರೆ. ವಾಸ್ತವವಾಗಿ ಸ್ಮೃತಿ ನಾಯಕತ್ವದಲ್ಲಿ ಆರ್‌ಸಿಬಿ ಕಳೆದ ಆವೃತ್ತಿಯಲ್ಲಿ ಅಂದರೆ 2024ರ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಆರ್‌ಸಿಬಿ ಪುರುಷರ ತಂಡ ಸಾಧಿಸಲು ಸಾಧ್ಯವಾಗದ ಸಾಧನೆಯನ್ನು ಆರ್‌ಸಿಬಿ ಮಹಿಳಾ ತಂಡ ಮಾಡಿತ್ತು.

ಫೆಬ್ರವರಿ 14 ರಿಂದ ಆರಂಭ

ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಆರ್‌ಸಿಬಿ ಹೊರತುಪಡಿಸಿ, ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇದರಲ್ಲಿವೆ. ಈ ಆವೃತ್ತಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಮುಂಬೈನ ಬ್ರಬೋರ್ನ್ ಕ್ರೀಡಾಂಗಣ, ಲಕ್ನೋದ ಏಕಾನಾ ಕ್ರೀಡಾಂಗಣ ಮತ್ತು ವಡೋದರಾದ ಕೋಟಂಬಿ ಕ್ರೀಡಾಂಗಣಗಳು ಆತಿಥ್ಯವಹಿಸಲಿವೆ.

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ನಡುವಿನ ಮೊದಲ ಪಂದ್ಯ ಫೆಬ್ರವರಿ 14 ರಂದು ವಡೋದರಾದಲ್ಲಿ ನಡೆಯಲಿದ್ದು, ಎಲಿಮಿನೇಟರ್ ಪಂದ್ಯ ಮಾರ್ಚ್ 13 ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಫೈನಲ್ ಪಂದ್ಯವು ಮಾರ್ಚ್ 15 ರಂದು ಅದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ