
ಓವಲ್ ಟೆಸ್ಟ್‌ಗಾಗಿ (Oval Test) ಇಂಗ್ಲೆಂಡ್ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಮಾಡು ಇಲ್ಲವೇ ಮಡಿ ಪಂದ್ಯದಿಂದ ನಾಯಕ ಬೆನ್ ಸ್ಟೋಕ್ಸ್ (Ben Stokes), ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸೆ ಹೊರಬಿದ್ದಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ನಾಯಕ ಬೆನ್ ಸ್ಟೋಕ್ಸ್ ಅಲಭ್ಯತೆ ಇಂಗ್ಲೆಂಡ್ ತಂಡಕ್ಕೆ ದೊಡ್ಡ ನಷ್ಟ. ಆದಾಗ್ಯೂ ಇಂಗ್ಲೆಂಡ್ ತಂಡ ತನ್ನ ಕೊನೆಯ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿರುವ 11 ಆಟಗಾರರು ಕೂಡ ಅಪಾಯಕಾರಿ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡದ 11ನೇ ಆಟಗಾರನ ಕೂಡ ಆಲ್ರೌಂಡರ್ ಪಟ್ಟಿಯಲ್ಲಿ ಸೇರುತ್ತಾನೆ ಎಂದಾದರೆ, ಇಂಗ್ಲೆಂಡ್ ತಂಡ ಕೊನೆಯ ಟೆಸ್ಟ್ ಪಂದ್ಯಕ್ಕೆ ಯಾವ ರೀತಿಯ ತಯಾರಿ ಮಾಡಿಕೊಂಡಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.
ಓವಲ್ ಟೆಸ್ಟ್‌ಗಾಗಿ ಇಂಗ್ಲೆಂಡ್ ಘೋಷಿಸಿರುವ ಪ್ಲೇಯಿಂಗ್ ಹನ್ನೊಂದರಲ್ಲಿ ಒಬ್ಬನೇ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲ. ಅರೆ ಕಾಲಿಕ ಸ್ಪಿನ್ನರ್ಗಳಾಗಿ ಜೋ ರೂಟ್, ಹ್ಯಾರಿ ಬ್ರೂಕ್ ಹಾಗೂ ಜಾಕೋಬ್ ಬೆಥೆಲ್ ಇದ್ದಾರದರೂ ಅವರಿಂದ ಪಂದ್ಯ ಬದಲಿಸುವ ಪ್ರದರ್ಶನ ನಿರೀಕ್ಷಿಸುವುದು ಕಷ್ಟ ಸಾಧ್ಯ. ಉಳಿದಂತೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರಲ್ಲಿ ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್‌ಗೆ ಅವಕಾಶ ನೀಡಿದೆ, ಈ ನಾಲ್ವರೂ ವೇಗದ ಬೌಲರ್‌ಗಳು. ಜೊತೆಗೆ ಈ ಬೌಲರ್‌ಗಳಲ್ಲಿ ಮೂವರು ಸ್ವಿಂಗ್ ಬೌಲರ್‌ಗಳಿದ್ದಾರೆ. ಹಾಗೆಯೇ ಈ ಎಲ್ಲರೂ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಬಲ್ಲವರಾಗಿದ್ದಾರೆ. ಇದರರ್ಥ ಓವಲ್ ಪಿಚ್ ಸ್ವಿಂಗ್‌ಗೆ ಸಹಾಯಕವಾಗಬಹುದು. ಹಾಗೆಯೇ ಬ್ಯಾಟ್ಸ್ಮನ್ಗಳಿಗೆ ರನ್ ಗಳಿಸಲು ಕಷ್ಟಕರವಾಗಬಹುದು ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.
ಓವಲ್ ಪಿಚ್ ಸಾಮಾನ್ಯವಾಗಿ ಉತ್ತಮ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದೆ. ಆದರೆ ಇಂಗ್ಲೆಂಡ್ ತಂಡದಲ್ಲೆ ಕೇವಲ ವೇಗದ ಬೌಲರ್‌ಗಳಿಗೆ ಅವಕಾಶ ನೀಡಿರುವುದನ್ನು ಗಮನಿಸಿದರೆ, ನಾಳಿನ ಪಂದ್ಯದಲ್ಲಿ ಪಿಚ್ ವೇಗದ ಬೌಲರ್‌ಗಳಿಗೆ ನೆರವಾಗಬಹುದು. ಅದರಲ್ಲೂ ಸ್ವಿಂಗ್ ಬೌಲರ್‌ಗಳು ಮೇಲುಗೈ ಸಾಧಿಸಬಹುದು. ಇದರರ್ಥ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ ಈ ಸ್ವಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬೇರೆಯದ್ದೇ ತಂತ್ರದೊಂದಿಗೆ ಕಣಕ್ಕಿಳಿಬೇಕಾಗುತ್ತದೆ.
IND vs ENG: ಕೊನೆಯ ಟೆಸ್ಟ್ಗೆ ಇಂಗ್ಲೆಂಡ್ ಪ್ಲೇಯಿಂಗ್ 11 ಪ್ರಕಟ; ನಾಯಕ ಸೇರಿದಂತೆ ತಂಡದಲ್ಲಿ 4 ಬದಲಾವಣೆ
ಅಲ್ಲದೆ ಇಂಗ್ಲೆಂಡ್ ತಂಡದಲ್ಲಿರುವಂತೆ ಭಾರತದಲ್ಲೂ ಅತ್ಯುತ್ತಮ ಸ್ವಿಂಗ್ ಬೌಲರ್‌ಗಳಿದ್ದಾರೆ. ಆದರೆ ಭಾರತ ತಂಡದಲ್ಲಿ ಇಬ್ಬರು ಸ್ಪಿನ್ನರ್ಗಳನ್ನು ಆಡಿಸುವ ಸಾಧ್ಯತೆಗಳಿವೆ. ಇಡೀ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಆಡುವುದನ್ನು ನಾವು ಕಾಣಬಹುದಾಗಿದೆ. ಇದರರ್ಥ ಭಾರತ ತಂಡ ಇಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಆಡಬಹುದು. ಒಂದು ವೇಳೆ ಈ ಪಿಚ್ ಸ್ಪಿನ್ನರ್ಗಳಿಗೆ ನೆರವಾಗದಿದ್ದರೆ, ಭಾರತ ತಂಡಕ್ಕೆ ಹಿನ್ನಡೆಯಾಗುವುದಂತೂ ಖಚಿತ.
ಇಂಗ್ಲೆಂಡ್‌ನ ಆಡುವ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್.