IND vs PAK: ಪಾಕ್ ವಿರುದ್ಧದ ಸೆಮಿಫೈನಲ್ ಪಂದ್ಯದಿಂದಲೂ ಹಿಂದೆ ಸರಿದ ಇಂಡಿಯಾ ಚಾಂಪಿಯನ್ಸ್
WCL Semifinal 2025: ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಸೆಮಿಫೈನಲ್‌ನಲ್ಲಿ ಭಾರತ ಚಾಂಪಿಯನ್ಸ್ ತಂಡ ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದೆ. ಲೀಗ್ ಹಂತದಲ್ಲಿಯೂ ಈ ಎರಡು ತಂಡಗಳ ನಡುವಿನ ಪಂದ್ಯ ಕೂಡ ರದ್ದಾಗಿತ್ತು. ಭಾರತ-ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆ ಇದಕ್ಕೆ ಕಾರಣ ಎನ್ನಲಾಗಿದೆ.ಈ ನಿರ್ಧಾರದಿಂದ ಸೆಮಿಫೈನಲ್‌ನ ಭವಿಷ್ಯ ಅನಿಶ್ಚಿತವಾಗಿದೆ. ಹೀಗಾಗಿ ಆಯೋಜಕರು ಯಾವ ಪರ್ಯಾಯ ಹಾದಿಯನ್ನು ಕಂಡುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2025) ಲೀಗ್ ಇದೀಗ ಸೆಮಿಫೈನಲ್ ಸುತ್ತಿಗೆ ಎಂಟ್ರಿಕೊಟ್ಟಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 6 ದೇಶಗಳ ಲೆಜೆಂಡ್ ಆಟಗಾರರು ಈ ಲೀಗ್‌ನಲ್ಲಿ ಆಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಲೀಗ್‌ನ ಸೆಮಿಫೈನಲ್ ಪಂದ್ಯಗಳು ಜುಲೈ 31 ರಂದು ನಡೆಯಲಿದ್ದು, ವೇಳಾಪಟ್ಟಿಯ ಪ್ರಕಾರ ಮೊದಲ ಸೆಮಿಫೈನಲ್ ಪಂದ್ಯ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ (India Champions vs Pakistan Champions) ತಂಡಗಳ ನಡುವೆ ನಡೆಯಬೇಕಿದೆ. ಆದರೆ ಈ ಪಂದ್ಯದ ಕುರಿತು ಇದೀಗ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.
ಭಾರತ- ಪಾಕ್ ಪಂದ್ಯ ಮತ್ತೆ ರದ್ದು
ಗುರುವಾರ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ನಿರಾಕರಿಸಿದ್ದಾರೆ. ವಾಸ್ತವವಾಗಿ ಉಭಯ ತಂಡಗಳ ನಡುವೆ ಈ ಮೊದಲೇ ಲೀಗ್ ಹಂತದ ಪಂದ್ಯ ನಡೆಯಬೇಕಿತ್ತು. ಆದರೆ ಈ ಪಂದ್ಯವನ್ನು ಆಡಲು ಭಾರತೀಯ ಆಟಗಾರರು ಹಿಂದೇಟು ಹಾಕಿದರು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದೀಗ ಸೆಮಿಫೈನಲ್ನಲ್ಲೂ ಉಭಯ ತಂಡಗಳ ನಡುವೆ ಪಂದ್ಯ ನಡೆಯಬೇಕಿದ್ದು, ಲೀಗ್ ಪಂದ್ಯದಂತೆಯೇ ಸೆಮಿಫೈನಲ್ ಪಂದ್ಯವನ್ನು ಆಡುವುದಿಲ್ಲ ಎಂದು ಇಂಡಿಯಾ ಚಾಂಪಿಯನ್ಸ್ ಆಟಗಾರರು ಆಯೋಜಕರಿಗೆ ತಿಳಿಸಿದ್ದಾರೆ.
ಲೀಗ್ ಹಂತದಲ್ಲಿಯೂ ಪಂದ್ಯ ನಡೆಯಲಿಲ್ಲ
ಮೇಲೆ ಹೇಳಿದಂತೆ ಲೀಗ್ ಹಂತದ ಆರಂಭದಲ್ಲಿ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಆಗಲೂ ಭಾರತೀಯ ಆಟಗಾರರು ಪಂದ್ಯವನ್ನು ಆಡದಿರಲು ನಿರ್ಧರಿಸಿದ್ದರು. ಹೀಗಾಗಿ ಅಂಕಗಳನ್ನು ಎರಡೂ ತಂಡಗಳ ನಡುವೆ ಹಂಚಲಾಯಿತು. ಆದರೆ ಈ ಬಾರಿ ಇದು ನಾಕೌಟ್ ಪಂದ್ಯವಾಗಿದ್ದು, ಫೈನಲ್ ದೃಷ್ಟಿಯಿಂದ ಈ ಪಂದ್ಯ ಬಹಳ ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ತಂಡವು ಫೈನಲ್‌ನಲ್ಲಿ ಸ್ಥಾನ ಪಡೆಯುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಥವಾ ಭಾರತ ತಂಡದ ಸೆಮಿಫೈನಲ್ ಪಂದ್ಯವನ್ನು ಬೇರೆ ಯಾವುದಾದರೂ ತಂಡದೊಂದಿಗೆ ನಡೆಸುವ ಸಾಧ್ಯತೆಗಳು ಇವೆ.
ವಾಸ್ತವವಾಗಿ, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ. ಇದು ಕ್ರೀಡೆಯ ಮೇಲೂ ಪರಿಣಾಮ ಬೀರಿದೆ. ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಈಗಾಗಲೇ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಆಡಲು ನಿರಾಕರಿಸಿದ್ದರು.
WCL 2025: ಶಿಖರ್ ಧವನ್ ಸಿಡಿಲಬ್ಬರದ ನಡುವೆಯೂ ಸೋತ ಇಂಡಿಯಾ ಚಾಂಪಿಯನ್ಸ್
ಸೆಮಿಫೈನಲ್ ತಲುಪಿರುವ ಇಂಡಿಯಾ
ಮಂಗಳವಾರ ನಡೆದ ತನ್ನ ಕೊನೆಯ ಗುಂಪು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವನ್ನು ಕೇವಲ 13.2 ಓವರ್‌ಗಳಲ್ಲಿ ಸೋಲಿಸುವ ಮೂಲಕ ಇಂಡಿಯಾ ಚಾಂಪಿಯನ್ಸ್ ಸೆಮಿಫೈನಲ್ ತಲುಪಿದೆ. ಈ ಆವೃತ್ತಿಯಲ್ಲಿ ಇಂಡಿಯಾ ಚಾಂಪಿಯನ್ಸ್ ದಾಖಲಿಸಿದ ಮೊದಲ ಗೆಲುವು ಇದಾಗಿದ್ದು, ಈ ಒಂದು ಗೆಲುವಿನೊಂದಿಗೆ ಯುವರಾಜ್ ಸಿಂಗ್ ಪಡೆ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ ಸೆಮಿಫೈನಲ್‌ನಲ್ಲಿ ಪಾಕ್ ವಿರುದ್ಧ ಆಡದಿರಲು ಆಟಗಾರರು ನಿರ್ಧರಿಸಿದ್ದಾರೆ. ಹೀಗಾಗಿ ಆಯೋಜಕರು ಸೆಮಿಫೈನಲ್ ಪಂದ್ಯಗಳನ್ನು ಯಾವ ರೀತಿಯಾಗಿ ಆಯೋಜಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
