IND vs ENG: ಕೊನೆಯ ಟೆಸ್ಟ್ಗೆ ಇಂಗ್ಲೆಂಡ್ ಪ್ಲೇಯಿಂಗ್ 11 ಪ್ರಕಟ; ನಾಯಕ ಸೇರಿದಂತೆ ತಂಡದಲ್ಲಿ 4 ಬದಲಾವಣೆ
England Playing XI: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ನಾಲ್ಕು ಆಘಾತಕಾರಿ ಬದಲಾವಣೆಗಳನ್ನು ಮಾಡಿದೆ. ನಾಯಕ ಬೆನ್ ಸ್ಟೋಕ್ಸ್ ಗಾಯದಿಂದಾಗಿ ಹೊರಗುಳಿದಿದ್ದು, ಅವರ ಸ್ಥಾನವನ್ನು ಓಲಿ ಪೋಪ್ ವಹಿಸಲಿದ್ದಾರೆ. ಲಿಯಾಮ್ ಡಾಸನ್, ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸ್ ಅವರನ್ನು ಕೈಬಿಡಲಾಗಿದೆ. ಜಾಕೋಬ್ ಬೆಥೆಲ್, ಗಸ್ ಅಟ್ಕಿನ್ಸನ್, ಮತ್ತು ಜೇಮಿ ಓವರ್ಟನ್ ಅವರು ತಂಡ ಸೇರಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (England vs India) ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಕೊನೆಯ ಪಂದ್ಯ ಜುಲೈ 31 ರಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವೆ ಇದುವರೆಗೆ ನಡೆದಿರುವ 4 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದರೆ, ಸರಣಿ ಇಂಗ್ಲೆಂಡ್ ಪಾಲಾಗಲಿದೆ. ಇತ್ತ ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿ 2-2 ರಿಂದ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ. ಹೀಗಾಗಿ ಉಭಯ ತಂಡಗಳು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಈ ನಡುವೆ ಈ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗವನ್ನು (England Playing XI) ಘೋಷಿಸಿದೆ. ಅಚ್ಚರಿಯ ಸಂಗತಿಯೆಂದರೆ ಇಡೀ ಸರಣಿಯಲ್ಲಿ ಕೇವಲ ಒಂದೊಂದು ಬದಲಾವಣೆಗಳನ್ನು ಮಾಡಿದ್ದ ಇಂಗ್ಲೆಂಡ್, ಅಂತಿಮ ಟೆಸ್ಟ್ ಪಂದ್ಯಕ್ಕೆ ತನ್ನ ಪ್ಲೇಯಿಂಗ್ 11ನಲ್ಲಿ ಒಟ್ಟು 4 ಬದಲಾವಣೆಗಳನ್ನು ಮಾಡಿದೆ. ಆಶ್ಚರ್ಯಕರ ಸಂಗತಿಯೆಂದರೆ ತಂಡದ ನಾಯಕ ಕೂಡ ಬದಲಾಗಿದ್ದಾನೆ.
ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್
ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ತನ್ನ ಆಡುವ ಹನ್ನೊಂದರ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಬಲ ಭುಜದ ಗಾಯದಿಂದಾಗಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಈ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರಲ್ಲದೆ, ಸ್ಪಿನ್ನರ್ ಲಿಯಾಮ್ ಡಾಸನ್ ಮತ್ತು ವೇಗದ ಬೌಲರ್‌ಗಳಾದ ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸ್ ಅವರನ್ನು ಸಹ ಪ್ಲೇಯಿಂಗ್ 11 ರಿಂದ ಕೈಬಿಡಲಾಗಿದೆ. ಇಂಗ್ಲೆಂಡ್ ತನ್ನ ಹೊಸ ಪ್ಲೇಯಿಂಗ್ ಹನ್ನೊಂದರಲ್ಲಿ ಯುವ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ ಅವರನ್ನು ಸೇರಿಸಿಕೊಂಡಿದೆ. ಇವರ ಹೊರತಾಗಿ, ಗಸ್ ಅಟ್ಕಿನ್ಸನ್ ಮತ್ತು ಜೇಮಿ ಓವರ್ಟನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್ ಜೋಶ್ ಟಂಗ್ ಕೂಡ ಈ ಪಂದ್ಯದ ಭಾಗವಾಗಲಿದ್ದಾರೆ.
Ben Stokes will miss out on the final Test of the series with a right shoulder injury ❌
And we’ve made four changes to our side 👇
— England Cricket (@englandcricket) July 30, 2025
ಇಂಗ್ಲೆಂಡ್‌ಗೆ ಸ್ಟೋಕ್ಸ್ ಆಘಾತ
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕಳೆದ ಎರಡು ಪಂದ್ಯಗಳಲ್ಲಿ ಬಹಳಷ್ಟು ಬೌಲಿಂಗ್ ಮಾಡಿದ್ದರು. ಇದರಿಂದಾಗಿ ಅವರು ಬಲ ಭುಜದ ಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆಯಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ ಪ್ರಸ್ತುತ ಸರಣಿಯಲ್ಲಿ ಸ್ಟೋಕ್ಸ್ 17 ವಿಕೆಟ್ ಕಬಳಿಸಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇದು ಮಾತ್ರವಲ್ಲದೆ, ಅವರು ಶತಕ ಸೇರಿದಂತೆ ಸರಣಿಯಲ್ಲಿ ಒಟ್ಟು 304 ರನ್‌ಗಳನ್ನು ಬಾರಿಸಿದ್ದಾರೆ. ಹೀಗಿರುವಾಗ ಸ್ಟೋಕ್ಸ್ ಅನುಪಸ್ಥಿತಿ ಇಂಗ್ಲೆಂಡ್‌ಗೆ ಹಿನ್ನಡೆಯುಂಟು ಮಾಡಿದೆ. ಪಂದ್ಯದಿಂದ ಹೊರಬಿದ್ದಿರುವ ಸ್ಟೋಕ್ಸ್ ಬದಲಿಗೆ ಓಲಿ ಪೋಪ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್‌ನ ಆಡುವ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Wed, 30 July 25
