2024 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಯಶಸ್ಸು ಸಿಗುವ ಭರವಸೆಯೊಂದಿಗೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ಬಾಬರ್ ಆಝಂ (Babar Azam) ಅವರನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಿದೆ. ನಾಯಕತ್ವ ಕಳೆದುಕೊಂಡ 5 ತಿಂಗಳ ನಂತರ ಬಾಬರ್ ಮತ್ತೆ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ ನಾಯಕತ್ವ ಬದಲಾದರೂ ತಂಡದ ಪ್ರದರ್ಶನ ಮಾತ್ರ ಮೊದಲಿನಂತೆಯೇ ಇದೆ. ಮೊದಲು ನ್ಯೂಜಿಲೆಂಡ್ ಬಿ ತಂಡದ ವಿರುದ್ಧ ಸರಣಿ ಡ್ರಾ ಮಾಡಿಕೊಂಡಿದ್ದ ಪಾಕ್, ಐರ್ಲೆಂಡ್ ವಿರುದ್ಧ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧ (ENG vs PAK) ಹೀನಾಯ ಸೋಲು ಪಾಕ್ ತಂಡದ ಟಿ20 ವಿಶ್ವಕಪ್ ತಯಾರಿಯನ್ನು ಬಯಲು ಮಾಡಿದೆ. ಲಂಡನ್ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಸೋಲಿಸಿ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಅದರ ಸಿದ್ಧತೆಗಳನ್ನು ಪರಿಶೀಲಿಸಿತ್ತು. ಐರ್ಲೆಂಡ್ ತಲುಪಿದ ತಕ್ಷಣ ಮೊದಲ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಗಿ ಬಂದರೂ ಆ ಬಳಿಕ ಮತ್ತೆ ತಿರುಗೇಟು ನೀಡಿದ ತಂಡ ಮುಂದಿನ 2 ಪಂದ್ಯಗಳನ್ನು ಹೇಗೋ ಗೆದ್ದುಕೊಂಡಿತು. ಆದರೆ ಬಲಿಷ್ಠ ಇಂಗ್ಲೆಂಡ್ ಎದುರು ಪಾಕ್ ತಂಡದ ಆಟ ನಡೆಯಲ್ಲಿಲ್ಲ. ಹೀಗಾಗಿ ತಂಡ ಸರಣಿ ಕಳೆದುಕೊಂಡಿತು.
PAK vs ENG: ರೋಹಿತ್ ದಾಖಲೆ ಉಡೀಸ್; ಕೊಹ್ಲಿ ಹಿಂದೆ ಬಿದ್ದ ಪಾಕ್ ನಾಯಕ ಬಾಬರ್ ಆಝಂ
ನಾಲ್ಕು ಪಂದ್ಯಗಳ ಸರಣಿಯ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು ಇದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಸಿದ್ಧತೆಗಳ ಮೇಲೆ ಪರಿಣಾಮ ಬೀರಿತ್ತು. ಆದರೆ ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್, ಉಳಿದ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ ಎಂದು ತೋರಿಸಿದೆ. ಲಂಡನ್‌ನ ಓವಲ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು, ಮೊದಲು ಇಂಗ್ಲೆಂಡ್‌ನ ಬೌಲರ್‌ಗಳು ಪಾಕ್ ತಂಡವನ್ನು ಅಲ್ಪ ರನ್‌ಗಳಿಗೆ ಕಟ್ಟಿಹಾಕಿದರೆ, ನಂತರ ತಂಡದ ಬ್ಯಾಟ್ಸ್‌ಮನ್‌ಗಳು ಅದ್ಭುತ ಬ್ಯಾಟಿಂಗ್ ನಡೆಸಿ ಪಾಕ್ ತಂಡವನ್ನು ಸುಲಭವಾಗಿ ಸೋಲಿಸಿದರು.
ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಜೋಡಿ ನಾಯಕ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರೂ ಪವರ್‌ಪ್ಲೇ ಅಂತ್ಯಕ್ಕೆ 59 ರನ್ ಸೇರಿಸಿದರು. ಬಾಬರ್ ವಿಶೇಷವಾಗಿ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಂಡರು ಮತ್ತು ಮುಕ್ತವಾಗಿ ಬೌಂಡರಿಗಳನ್ನು ಬಾರಿಸಿದರು. ಆದರೆ ಜೋಫ್ರಾ ಆರ್ಚರ್ ಪವರ್‌ಪ್ಲೇಯ ಕೊನೆಯ ಎಸೆತದಲ್ಲಿ ಬಾಬರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಆ ನಂತರ ಪಾಕಿಸ್ತಾನ ಕೇವಲ 27 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆರನೇ ವಿಕೆಟ್‌ಗೆ ಉಸ್ಮಾನ್ ಖಾನ್ ಮತ್ತು ಇಫ್ತಿಕರ್ ಅಹ್ಮದ್ ನಡುವೆ 40 ರನ್‌ಗಳ ಜೊತೆಯಾಟ ಇಲ್ಲದಿದ್ದರೆ, ಪಾಕಿಸ್ತಾನ ತಂಡ ಇನ್ನೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು. ಅಂತಿಮವಾಗಿ ತಂಡ 157 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು.
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ನಾಯಕ ಜೋಸ್ ಬಟ್ಲರ್ 6.2 ಓವರ್‌ಗಳಲ್ಲಿ 82 ರನ್ ಗಳಿಸಿ ಸುಲಭ ಜಯವನ್ನು ಖಚಿತಪಡಿಸಿದರು. ಮಧ್ಯದಲ್ಲಿ, ವೇಗದ ಬೌಲರ್ ಹ್ಯಾರಿಸ್ ರೌಫ್ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸ್ವಲ್ಪ ಪುನರಾಗಮನದ ಭರವಸೆ ಮೂಡಿಸಿದರು. ಆದರೆ ಜಾನಿ ಬೈರ್‌ಸ್ಟೋವ್ ಮತ್ತು ಹ್ಯಾರಿ ಬ್ರೂಕ್ 27 ಎಸೆತಗಳಲ್ಲಿ 46 ರನ್‌ಗಳ ಸ್ಫೋಟಕ ಜೊತೆಯಾಟವನ್ನು ಮಾಡಿ ಕೇವಲ 15.3 ಓವರ್‌ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರೌಫ್ ಬಿಟ್ಟರೆ ಪಾಕಿಸ್ತಾನದ ಯಾವುದೇ ಬೌಲರ್‌ಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ