IND vs ENG: ಭಾರತಕ್ಕೆ ಹ್ಯಾಟ್ರಿಕ್ ಸೋಲು; ಟಿ20 ಸರಣಿ ಗೆದ್ದ ಇಂಗ್ಲೆಂಡ್
England vs India T20: ಬ್ರಿಸ್ಟಲ್‌ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಭಾರತ ಸರಣಿಯಲ್ಲಿ ಉಳಿಯಲು ಗೆಲ್ಲಲೇಬೇಕಿತ್ತು, ಆದರೆ ಕಳಪೆ ಬ್ಯಾಟಿಂಗ್‌ನಿಂದ ಸೋತಿತು. ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸಿದ್ದರೂ, 158 ರನ್ ಗಳಿಸಿತ್ತು. ಇಂಗ್ಲೆಂಡ್ ಕೇವಲ ಒಂದು ವಿಕೆಟ್ ಕಳೆದುಕೊಂಡು 14ನೇ ಓವರ್‌ನಲ್ಲಿ ಗುರಿ ತಲುಪಿ, ಐದು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

ಬ್ರಿಸ್ಟಲ್‌ನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಟಿ20 ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ 9 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಸರಣಿಯಲ್ಲಿ ಜೀವಂತವಾಗಿ ಉಳಿಯಲು ಟೀಂ ಇಂಡಿಯಾ (England vs India) ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ತಂಡದ ಕಳಪೆ ಬ್ಯಾಟಿಂಗ್ ಈ ಪಂದ್ಯದಲ್ಲೂ ಮುಂದುವರೆದ ಕಾರಣ, ಶ್ರೇಯಸ್ ಅಯ್ಯರ್ ಪಡೆ ಏಕಪಕ್ಷೀಯವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್ (Shreyas Iyer) ಅವರ ಅರ್ಧಶತಕದ ನೆರವಿನಿಂದ 158 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 1 ವಿಕೆಟ್ ಕಳೆದುಕೊಂಡು 14ನೇ ಓವರ್ನಲ್ಲೇ ಗೆಲುವಿನ ದಡ ಮುಟ್ಟಿತು.
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಹಿಡಿದಿರುವ ಗ್ರಹಣ ಇದುವರೆಗೂ ಬಿಡದೆ ಇರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಭಾರತದ ಅಗ್ರಕ್ರಮಾಂಕ ಬೇಜವಾಬ್ದಾರಿಯುತ ಬ್ಯಾಟಿಂಗ್ ಮಾಡಿತು. ಒಬ್ಬರೂ ಪಿಚ್ನ ಮರ್ಮವನ್ನು ಅರಿಯುವ ಪ್ರಯತ್ನ ಮಾಡಲಿಲ್ಲ. ವೈಭವ್ ಆಗಲಿ, ಅಭಿಷೇಕ್ ಆಗಲಿ ಅಥವಾ ಇಶಾನ್ ಕಿಶನ್ ಆಗಲಿ ಯಾರೊಬ್ಬರು ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡದೆ ಸಿಕ್ಸರ್ ಸಿಡಿಸುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿ, ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಏಕಾಂಗಿಯನ್ನಾಗಿಸಿದರು.
ಭಾರತದ ಬ್ಯಾಟಿಂಗ್ ವೈಫಲ್ಯ
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 10 ಎಸೆತಗಳನ್ನು ಎದುರಿಸಿ 15 ರನ್ ಬಾರಿಸಿ ಔಟಾದರೆ, ವೈಭವ್ ವಿಕೆಟ್ ಬಳಿಕ ಬಂದ ಇಶಾನ್ ಕಿಶನ್ ಕೂಡ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ ಕೂಡ 16 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ಟೀಂ ಇಂಡಿಯಾ ಕೇವಲ 48 ರನ್ಗಳಿಗೆ ತನ್ನ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ನಾಲ್ಕನೇ ವಿಕೆಟ್ಗೆ ಜೊತೆಯಾದ ದುಬೆ ಹಾಗೂ ನಾಯಕ ಶ್ರೇಯಸ್ ಅಯ್ಯರ್ 50 ರನ್ಗಳ ಜೊತೆಯಾಟದೊಂದಿಗೆ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಆದರೆ ದುಬೆ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು.
ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟ
ಉಪನಾಯಕ ತಿಲಕ್ ವರ್ಮಾ ಅವರ ಇನ್ನಿಂಗ್ಸ್ ಕೂಡ 11 ರನ್ಗಳಿಗೆ ಅಂತ್ಯವಾಯಿತು. ಸತತ ವಿಕೆಟ್ಗಳ ಪತನದ ನಡುವೆಯೂ ಒಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದ ನಾಯಕ ಶ್ರೇಯಸ್ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 80 ರನ್ ಬಾರಿಸಿದರು. ಶ್ರೇಯಸ್ ಏಕಾಂಗಿ ಹೋರಾಟಕ್ಕೆ ಉಳಿದವರಿಂದ ಯಾವ ನೆರವೂ ಸಿಗಲಿಲ್ಲ. ಈ ಪಂದ್ಯದಲ್ಲಿ ಶ್ರೇಯಸ್ ಹೊರತುಪಡಿಸಿ ದುಬೆ ಮಾತ್ರ 20 ರನ್ಗಳ ಗಡಿ ದಾಟಿದರು. ಉಳಿದವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಇತ್ತ ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಜೋಶ್ ಟಾಂಗ್ ಅದ್ಭುತ ಬೌಲಿಂಗ್ ಮಾಡಿ ತಲಾ ಎರಡು ವಿಕೆಟ್ ಪಡೆದರೆ, ವಿಲ್ ಜಾಕ್ಸ್ ಮತ್ತು ಆದಿಲ್ ರಶೀದ್ ಕೂಡ ತಲಾ ಒಂದು ವಿಕೆಟ್ ಪಡೆದರು.
IND vs ENG: ಶ್ರೇಯಸ್ ಏಕಾಂಗಿ ಹೋರಾಟ; ಉಳಿದವರು ಹೋದ ಪುಟ್ಟ ಬಂದ ಪುಟ್ಟ
ಸುಲಭವಾಗಿ ಗೆದ್ದ ಇಂಗ್ಲೆಂಡ್
ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಸಾಧಾರಣ ಆರಂಭವನ್ನು ಪಡೆದುಕೊಂಡಿತು. ಆರಂಭದಲ್ಲಿ ಇಂಗ್ಲೆಂಡ್ ಆರಂಭಿಕರಿಗೂ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಈ ಒತ್ತಡದಿಂದಾಗಿ ಬಟ್ಲರ್ ಕೂಡ ಕೇವಲ 8 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ಸಾಲ್ಟ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಭಾರತದ ಬೌಲರ್ಗಳಿಗೆ ವಿಕೆಟ್ ಪಡೆಯುವ ಅವಕಾಶವನ್ನೇ ನೀಡಲಿಲ್ಲ. ಇದರ ಪರಿಣಾಮವಾಗಿ ಇಂಗ್ಲೆಂಡ್ 13.5 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ಆರಂಭಿಕ ಫಿಲ್ ಸಾಲ್ಟ್ ಅಜೇ 59 ರನ್ ಗಳಿಸಿದರೆ, ಹ್ಯಾರಿ ಬ್ರೂಕ್ ಅಜೇಯ 79 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 am, Fri, 10 July 26




