ಇಂಗ್ಲೆಂಡ್ ಕ್ರಿಕೆಟ್ ತಂಡ (England Cricket Team) ಇಂದು ಬೆಳಗ್ಗೆ ಬೆಂಗಳೂರಿನಿಂದ ಲಕ್ನೋಗೆ ಹೊರಟಿದೆ. ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿರುವ ಹಾಲಿ ಚಾಂಪಿಯನ್ನರು ಭಾನುವಾರ ಉತ್ತರ ಪ್ರದೇಶದ ರಾಜಧಾನಿಯಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ಸೋಲು ಅನುಭವಿಸುವ ಮೂಲಕ 2023 ರ ಕ್ರಿಕೆಟ್ ವಿಶ್ವಕಪ್‌ನಿಂದ ಬಹುತೇಕ ಹೊರಬಿದ್ದಾಗಿದೆ.
ಗುರುವಾರ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಕೂಡ ಅತ್ಯಂತ ಕಳಪೆ ಪ್ರದರ್ಶನ ತೋರಿತು. ಕೇವಲ 156 ರನ್ಗಳಿಗೆ ಆಲೌಟ್ ಆಯಿತು. ಸದ್ಯ ಆಂಗ್ಲರು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಬಾರಿ ಸೋತಿದ್ದರಿಂದ, ವಿಶ್ವಕಪ್ ಪ್ರಶಸ್ತಿ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ತಂಡ ಎಲ್ಲ ವಿಭಾಗಗಳಲ್ಲಿ ವೈಫಲ್ಯ ಅನುಭವಿಸುತ್ತಿದೆ. ಸ್ಟಾರ್ ಆಟಗಾರರ ದಂಡೇ ಇದ್ದರೂ ಭಾರತೀಯ ನೆಲದಲ್ಲಿ ಆಂಗ್ಲರಿಗೆ ಯಶಸ್ಸು ಸಿಗುತ್ತಿಲ್ಲ.
ENG vs SL ICC World Cup 2023: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಗೆ ಭರ್ಜರಿ ಜಯ
ವಿಶ್ವಕಪ್ 2023 ರಲ್ಲಿ ಇದುವರೆಗೆ ಭಾರತದಲ್ಲಿ ಇಂಗ್ಲೆಂಡ್ ಗೆದ್ದಿರುವುದು ಬಾಂಗ್ಲಾದೇಶ ವಿರುದ್ಧ ಮಾತ್ರ. ಸ್ವತಃ ನಾಯಕ ಜೋಸ್ ಬಟ್ಲರ್ ಅವರೇ ಫಾರ್ಮ್ಗೆ ಬರುತ್ತಿಲ್ಲ. ಗೆಲುವಿಗಾಗಿ ಹೆಣಗಾಡುತ್ತಿರುವ ಇಂಗ್ಲೆಂಡ್ ಸೆಮಿ-ಫೈನಲ್‌ಗೆ ತಲುಪಲು ಸತತವಾಗಿ ನಾಲ್ಕು ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಇಷ್ಟೇ ಸಾಲದು, ಇತರ ತಂಡಗಳ ಫಲಿತಾಂಶಗಳ ಮೇಲೆ ಇಂಗ್ಲೆಂಡ್ ಭವಿಷ್ಯ ನಿಂತಿದೆ. ಭಾನುವಾರ ಇಂಗ್ಲೆಂಡ್ ತಂಡ ಭಾರತವನ್ನು ಎದುರಿಸಿದ ನಂತರ, ಆಸ್ಟ್ರೇಲಿಯಾ, ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಶ್ವಕಪ್ ಪಂದ್ಯ ಅಕ್ಟೋಬರ್ 29 ರಂದು (ಭಾನುವಾರ) ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇರಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಲಕ್ನೋಗೆ ತಲುಪಿದ್ದು, ಇಂದಿನಿಂದ ಅಭ್ಯಾಸ ಶುರುಮಾಡಲಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಬಿಸಿಸಿಐ ಭಾರತದ ಆಟಗಾರರಿಗೆ ಕುಟುಂಬದವರೊಂದಿಗೆ ಸಮಯ ಕಳೆಯಲು ಎರಡು ದಿನಗಳ ವಿಶ್ರಾಂತಿ ನೀಡಿತ್ತು. ಇದನ್ನು ಮುಗಿಸಿ ರೋಹಿತ್ ಪಡೆ ಲಕ್ನೋದಲ್ಲಿ ಜೊತೆಯಾಗಿದ್ದಾರೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್. , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಇಂಗ್ಲೆಂಡ್ ತಂಡ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ