ಏಕದಿನ ವಿಶ್ವಕಪ್ ಶುರುವಾಗಲು ಇನ್ನು ಕೇವಲ ತಿಂಗಳು ಮಾತ್ರ ಉಳಿದಿವೆ. ಆದರೆ ಅದಕ್ಕೂ ಮುನ್ನವೇ ಇಂಗ್ಲೆಂಡ್ ವೇಗಿ ಸ್ಟೀವನ್ ಫಿನ್ (Steven Finn) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗೆ ದಿಢೀರ್ ನಿವೃತ್ತಿ ಘೋಷಿಸಲು ಮುಖ್ಯ ಕಾರಣ ಮೊಣಕಾಲು ಗಾಯದ ಸಮಸ್ಯೆ ಎಂದು ತಿಳಿಸಿದ್ದಾರೆ.
34 ವರ್ಷದ ಸ್ಟೀವನ್ ಫಿನ್ ಮೊಣಕಾಲು ಗಾಯದ ಸಮಸ್ಯೆಯ ಕಾರಣ ಕಳೆದೊಂದು ವರ್ಷದಿಂದ ಮೈದಾನಕ್ಕಿಳಿದಿರಲಿಲ್ಲ. ಇದೀಗ ಸಂಪೂರ್ಣ ಚೇತರಿಸಿಕೊಂಡು ಮೈದಾನಕ್ಕೆ ಮರಳುವ ವಿಶ್ವಾಸವನ್ನು ಸಹ ಹೊಂದಿಲ್ಲ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಫಿನ್ ತಿಳಿಸಿದ್ದಾರೆ.
2010 ರಲ್ಲಿ ಇಂಗ್ಲೆಂಡ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಸ್ಟೀವನ್ ಫಿನ್ ಕರಾರುವಾಕ್ ಬೌಲಿಂಗ್ ಮೂಲಕ ಮಿಂಚಿದ್ದರು. ಅಲ್ಲದೆ ಮೂರು ಬಾರಿ ಆ್ಯಶಸ್ ಸರಣಿ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಹಾಗೆಯೇ ಏಕದಿನ ಕ್ರಿಕೆಟ್ನಲ್ಲೂ ನೂರಕ್ಕೂ ಹೆಚ್ಚು ವಿಕೆಟ್ ಕಬಳಿಸಿ ಹೊಸ ಭರವಸೆ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆಯು ಸ್ಟೀವನ್ ಫಿನ್ ಅವರನ್ನು ದೀರ್ಘಕಾಲ ಮೈದಾನದಿಂದ ಹೊರಗುಳಿಯುವಂತೆ ಮಾಡಿತು.
ಇದಾಗ್ಯೂ ಇಂಗ್ಲೆಂಡ್ ಪರ 36 ಟೆಸ್ಟ್ ಪಂದ್ಯಗಳನ್ನಾಡಿರುವ ಫಿನ್ ಒಟ್ಟು 125 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 69 ಏಕದಿನ ಪಂದ್ಯಗಳಿಂದ 102 ವಿಕೆಟ್ ಪಡೆದಿದ್ದಾರೆ. ಇದಲ್ಲದೆ 21 ಟಿ20 ಪಂದ್ಯಗಳಿಂದ 27 ವಿಕೆಟ್ ಉರುಳಿಸಿದ್ದಾರೆ.
ನಾನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ 12 ತಿಂಗಳಿಂದ ನನ್ನ ದೇಹದೊಂದಿಗೆ ಹೋರಾಡುತ್ತಿದ್ದೇನೆ. ಇದೀಗ ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ. ಈ ಸೋಲಿನೊಂದಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ಸ್ಟೀವನ್ ಫಿನ್ ತಿಳಿಸಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಸೆಮಿಫೈನಲ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಗ್ಲೆನ್ ಮೆಕ್ಗ್ರಾಥ್
ಇಂಗ್ಲೆಂಡ್ ಪರ 36 ಟೆಸ್ಟ್‌ಗಳು ಸೇರಿದಂತೆ 125 ಪಂದ್ಯಗಳನ್ನು ಆಡಿರುವುದು ನಾನು ಕನಸು ಕಂಡಿದ್ದನ್ನು ಮೀರಿಸಿದೆ. ಕಳೆದ 12 ತಿಂಗಳುಗಳಲ್ಲಿ ವಿಶೇಷವಾಗಿ ಸಸೆಕ್ಸ್ ಕ್ರಿಕೆಟ್ ಕ್ಲಬ್ ನೀಡಿದ ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಇದೇ ವೇಳೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಸ್ಟೀವನ್ ಫಿನ್ ತಿಳಿಸಿದ್ದಾರೆ.
ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ನವೆಂಬರ್ 19 ರವರೆಗೆ ನಡೆಯಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಹಾಗೆಯೇ ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.